ಚೆನ್ನೈ: ಇದು ತಮಿಳುನಾಡಿನ ಸಾಮಾನ್ಯ ಬಡಕುಟುಂಬದ ರೈತನೋರ್ವನ ಪುತ್ರನ ಕಥೆ. ಬಡತನದಲ್ಲೇ ಶಿಕ್ಷಣ ಪಡೆದು, ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸುತ್ತಾ ಕೊನೆಗೆ ತಾವಿಷ್ಟಪಟ್ಟ ಹಾಗೆ ಇದೀಗ ಪ್ರಾಧ್ಯಾಪಕರಾಗಿದ್ದಾರೆ. 34 ವರ್ಷದ ಅರವಿಂದ್ ಪೆರುಮಾಳ್ ಅವರ ಬಗೆಗಿನ ಇಂಟ್ರೆಸ್ಟಿಂಗ್ ಕಥೆಯನ್ನು ಕೇಳಿದ್ರೆ, ಖಂಡಿತಾ ನಿಮಗೆ ಸ್ಪೂರ್ತಿಯಾಗದೆ ಇರಲಾರದು.
ಅರವಿಂದ್ ಪೆರುಮಾಳ್ ಅವರ ಪ್ರಯಾಣವು ತನ್ನ ಗುರಿಯನ್ನು ಸಾಧಿಸಲು ಸಾಕಷ್ಟು ತಿರುವುಗಳನ್ನು ಪಡೆದಿದೆ. ತಮಿಳುನಾಡು ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯನ್ನು ಬರೆದ ಅವರು ಪೊಲೀಸ್‌ಗೆ ಕಾನ್ಸ್‌ಟೇಬಲ್ ಆಗಿ ಕೆಲಸಕ್ಕೆ ಸೇರಿದ್ದಾರೆ.
ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ, ಅವರು ಉನ್ನತ ಶಿಕ್ಷಣವನ್ನು ಪಡೆಯಲು ಬಯಸಿದ್ದರು. ಆದರೆ, ಮನೆಯಲ್ಲಿ ಆರ್ಥಿಕ ಮುಗ್ಗಟ್ಟಿನಿಂದಾಗಿ ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಅವರು ತಮಿಳುನಾಡು ಪಿ ಎಸ್ ಸಿ ಬರೆದು ಪೊಲೀಸ್ ಪಡೆಗೆ ಕಾನ್ಸ್ಟೇಬಲ್ ಆಗಿ ಉದ್ಯೋಗ ಪಡೆದರು.
ಬಡ ರೈತನ ಮಗನಾಗಿರುವ ಪೆರುಮಾಳ್ ಕುಟುಂಬ ಜೀವನವನ್ನು ಪೂರೈಸಲು ಹೆಣಗಾಡುತ್ತಿದ್ದುದಾಗಿ ಹೇಳಿದ್ದಾರೆ. ಹೀಗಾಗಿ ಶಿಕ್ಷಣ ಪಡೆಯುವುದಕ್ಕಾಗಿ ಅವರು ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು. ಪದವಿ ಮತ್ತು ಸ್ನಾತಕೋತ್ತರ ಪದವಿಯ ಸಮಯದಲ್ಲಿ ಕುಟುಂಬವನ್ನು ಬೆಂಬಲಿಸಲು ಅವರು ತೋಟಗಳಲ್ಲಿ ಕೆಲಸ ಮಾಡಿದ್ದರು.
ಪಿಎಚ್‌ಡಿ ಮಾಡಲು ಬಯಸಿದ್ದರೂ, ಹಣಕಾಸಿನ ಅಡಚಣೆಗಳಿಂದ ಅದು ಸಾಧ್ಯವಾಗಲಿಲ್ಲ. 23ನೇ ವಯಸ್ಸಿನಲ್ಲಿ ಪೊಲೀಸ್ ಇಲಾಖೆಗೆ ಸೇರಿ 11 ವರ್ಷಗಳ ಕಾಲ ಅಲ್ಲೇ ಮುಂದುವರಿದಿದ್ದಾಗಿ ತಿಳಿಸಿದ್ದಾರೆ.
ಪೊಲೀಸ್ ಇಲಾಖೆಗೆ ಸೇರಿದ ನಂತರ ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದಲ್ಲಿ (ಎಂಎಸ್‌ಯು) ಪಿಎಚ್‌ಡಿ ಕೋರ್ಸ್‌ಗೆ ಪ್ರವೇಶ ಬರೆದು ಅದರಲ್ಲಿ ಪ್ರವೇಶ ಪಡೆದಿರುವುದಾಗಿ ಅವರು ತಿಳಿಸಿದ್ದಾರೆ. ಅರೆಕಾಲಿಕ ಪಿಎಚ್‌ಡಿ ಕೋರ್ಸ್ ಅನ್ನು ಮುಂದುವರಿಸಲು ಆಗಿನ ಪೊಲೀಸ್ ಅಧೀಕ್ಷಕ ಆರ್. ಚಿನ್ನಸ್ವಾಮಿ ಅವರಲ್ಲಿ ಅನುಮತಿ ಕೇಳಿದಾಕ್ಷಣ, ತಕ್ಷಣ ಅವರ ವಿನಂತಿಯನ್ನು ಒಪ್ಪಿಕೊಂಡರಂತೆ.
ತಿರುನಲ್ವೇಲಿ ಜಿಲ್ಲೆಯನ್ನು ಕೇಂದ್ರೀಕರಿಸಿ ಅನೌಪಚಾರಿಕ ವಲಯದಲ್ಲಿ ವೇತನ ಮಟ್ಟದ ಆರ್ಥಿಕ ಅಧ್ಯಯನ ಎಂಬ ಪ್ರಬಂಧಕ್ಕಾಗಿ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಅವರು ಪಿಎಚ್‌ಡಿಗಾಗಿ ನೋಂದಾಯಿಸಿಕೊಂಡ್ರು. 2019ರಲ್ಲಿ ತಮ್ಮ ಪಿಎಚ್‌ಡಿಯನ್ನು ಅವರು ಪೂರ್ಣಗೊಳಿಸಿದ್ದಾರೆ. ಆದರೆ, ಸಾಂಕ್ರಾಮಿಕ ರೋಗದಿಂದಾಗಿ 2021ರ ಡಿಸೆಂಬರ್ ನಲ್ಲಿ ಪೂರ್ಣಗೊಳಿಸಲಾಯಿತು.
ಕಳೆದ 11 ವರ್ಷಗಳಿಂದ ಸುತಮಲ್ಲಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೆರುಮಾಳ್ ಕಳೆದ ಗುರುವಾರ ಸೇವೆಯಿಂದ ಬಿಡುಗಡೆ ಹೊಂದಿದ್ದು, ಇದೀಗ ನಾಗರಕೋಯಿಲ್‌ನ ಕಾಲೇಜಿಗೆ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಲು ಮುಂದಾಗಿದ್ದಾರೆ.