ಪಾಟ್ನಾ: ಪೊಲೀಸ್ ಠಾಣೆಗೆ ಬಂದು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಕುರ್ಚಿಯ ಮೇಲೆ ಕುಳಿತ ಬಿಜೆಪಿ ಶಾಸಕರೊಬ್ಬರು ಕೇಸ್ ಡೈರಿ ಕೇಳಿರುವ ವಿಡಿಯೋ ವೈರಲ್ ಆಗಿದೆ.
ಬಿಹಾರದ ಬಿಜೆಪಿ ಶಾಸಕ ಮುರಾರಿ ಮೋಹನ್ ಝಾ ದರ್ಭಾಂಗಾ ಈ ರೀತಿ ದರ್ಪ ಮೆರೆದಿದ್ದಾರೆ. ಜಿಲ್ಲೆಯ ಕಿಯೋಟಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಕುರ್ಚಿಯ ಮೇಲೆ ಕುಳಿತು ಪ್ರಕರಣಕ್ಕೆ ಸಂಬಂಧಿಸಿದ ಸ್ಟೇಷನ್ ಡೈರಿಯನ್ನು ನೀಡುವಂತೆ ಒತ್ತಾಯಿಸಿದ್ದಾರೆ.
ಬಿಜೆಪಿ ಶಾಸಕರು ತಮ್ಮ ಕ್ಷೇತ್ರಕ್ಕೆ ತೆರಳಿದ್ದ ವೇಳೆ ಇಬ್ಬರು ವ್ಯಕ್ತಿಗಳಿಗೆ ಪೊಲೀಸರು ಥಳಿಸಿದ್ದರು ಎಂದು ತಿಳಿದು ಬಂದಿದೆ. ಇದರಿಂದ ಕೆರಳಿದ ಶಾಸಕರು ಪೊಲೀಸ್ ಠಾಣೆಗೆ ಆಗಮಿಸಿ ಪ್ರಕರಣಕ್ಕೆ ಸಂಬಂಧಿಸಿದ ಸ್ಟೇಷನ್ ಡೈರಿ ಕೇಳಿದ್ದಾರೆ.
ಈ ವೇಳೆ ಸ್ಥಳೀಯ ಪತ್ರಕರ್ತರು ಅಲ್ಲೇ ಇದ್ದ ಕಾರಣ ಸಾರ್ವಜನಿಕವಾಗಿ ಸ್ಟೇಷನ್ ಡೈರಿಯನ್ನು ತೋರಿಸಲು ಸಾಧ್ಯವಿಲ್ಲ ಎಂದು ಎಸ್‌ಎಚ್‌ಒ ಶಾಸಕರಿಗೆ ಹೇಳಿದ್ದಾರೆ. ಆದರೆ ಶಾಸಕರು ಪಶ್ಚಾತ್ತಾಪ ಪಡುವ ಮನಸ್ಥಿತಿಯಲ್ಲಿ ಇರಲಿಲ್ಲ.
ಶನಿವಾರ ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಈ ವಿಡಿಯೋವನ್ನು ಟ್ವೀಟ್ ಮಾಡಿ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಹಾರದಲ್ಲಿ ಎನ್‌ಡಿಎ ಸರ್ಕಾರ ಸರ್ಕಸ್ ನಡೆಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಶಾಸಕ ಮುರಾರಿ ಮೋಹನ್ ಝಾ ಅವರು, 2020ರ ಬಿಹಾರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಿಯೋಟಿ ಸ್ಥಾನದಿಂದ ಕಣಕ್ಕಿಳಿದಿದ್ದರು. ಆರ್‌ಜೆಡಿ ಮುಖಂಡ ಮತ್ತು ಮಾಜಿ ಸಚಿವ ಅಬ್ದುಲ್ ಸಿದ್ದಿಕಿ ಅವರನ್ನು ಸೋಲಿಸುವ ಮುಖಾಂತರ ಗಮನ ಸೆಳೆದಿದ್ದಾರೆ.