
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಹೀಗಾಗಿ ಬಹುತೇಕರು ಸ್ವಂತ ಉದ್ದಿಮೆ ಮಾಡಲು ಮುಂದಾಗುತ್ತಾರೆ. ಇದರ ಮಧ್ಯೆ ಹೇಗಾದರೂ ಮಾಡಿ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂದು ಪ್ರಯತ್ನ ನಡೆಸುತ್ತಿರುತ್ತಾರೆ. ತಾವು ಓದಿದ ವಿಷಯಕ್ಕೆ ಸಂಬಂಧವಿಲ್ಲದಿದ್ದರೂ ಸರ್ಕಾರಿ ಕೆಲಸಕ್ಕಾಗಿ ಹಾತೊರೆಯುತ್ತಾರೆ.
ಇದಕ್ಕೆ ಪುಷ್ಟಿ ನೀಡುವಂತಹ ತಾಜಾ ಉದಾಹರಣೆಯೊಂದು ಇಲ್ಲಿದೆ. ಆಂಧ್ರಪ್ರದೇಶದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಇದಕ್ಕೆ ಇಂಟರ್ಮೀಡಿಯಟ್ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಆದರೆ ಖಾಲಿ ಇರುವ 6,400 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಬರೋಬ್ಬರಿ 5,03,486 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಈ ಪೈಕಿ 10 ಮಂದಿ ಪಿ.ಎಚ್.ಡಿ. ಪಡೆದವರು, 930 ಮಂದಿ ಎಂ.ಟೆಕ್ ಪದವೀಧರರು, 5,284 ಮಂದಿ ಎಂಬಿಎ ಪದವೀಧರರು, ಎಂಎಸ್ಸಿ ಪದವಿ ಪಡೆದ 4,365 ಹಾಗೂ ಎಲ್ ಎಲ್ ಬಿ ಪದವಿ ಪಡೆದ 94 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಒಟ್ಟಾರೆ 13,961 ಮಂದಿ ಸ್ನಾತಕೋತರ ಪದವೀಧರರು ಹಾಗೂ 1,55,537 ಮಂದಿ ಪದವೀಧರರು ಇದ್ದಾರೆ. ಈ ಹುದ್ದೆಗಳಿಗೆ ಇಂದು ಪರೀಕ್ಷೆ ನಡೆಯುತ್ತಿದೆ.