ತಿರುವನಂತಪುರಂ: ಸಾರ್ವಜನಿಕವಾಗಿ ಪೊಲೀಸ್ ಅಧಿಕಾರಿಯಿಂದ ಕಿರುಕುಳಕ್ಕೊಳಗಾದ ಬಾಲಕಿಗೆ 1.5 ಲಕ್ಷ ರೂ. ಪರಿಹಾರ ನೀಡುವಂತೆ, ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ನೇತೃತ್ವದ ಕೇರಳ ಹೈಕೋರ್ಟ್ ಪೀಠ ಆದೇಶಿಸಿದೆ. ಪೊಲೀಸ್ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೇರಳ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.
ಚಪಾತಿಗೆ ಸಾಥ್ ನೀಡುವ ಹಸಿ ಬಟಾಣಿ ಗೊಜ್ಜು
ಏನಿದು ಪ್ರಕರಣ..?
ಆಗಸ್ಟ್ 27 ರಂದು, ಅಟ್ಟಿಂಗಲ್ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ತಂದೆ ಮತ್ತು ಅವರ ಶಾಲೆಗೆ ಹೋಗುತ್ತಿದ್ದ ಮಗಳಿಗೆ ಕಿರುಕುಳ ನೀಡಿದ್ದರು. ನಂತರ ಆಕೆಯ ಬ್ಯಾಗ್ನಲ್ಲಿ ಸಿಕ್ಕ ಫೋನ್ ಅನ್ನು ಅವರು ಕದ್ದಿದ್ದಾರೆ ಎಂದು ಪೊಲೀಸ್ ಆರೋಪ ಹೊರಿಸಿದ್ದರು. ಘಟನೆಯ ದಿನ ರಬ್ಬರ್ ಟ್ಯಾಪಿಂಗ್ ಕಾರ್ಮಿಕ ತಂದೆ ಜಯಚಂದ್ರ ಮತ್ತು ಅವರ ಮಗಳು ರಸ್ತೆಯ ಮೂಲಕ ಹಾದುಹೋಗುವ ಇಸ್ರೋದ ಬೃಹತ್ ಸರಕು ಸಾಗಣೆಯನ್ನು ವೀಕ್ಷಿಸಲು ತೆರಳಿದ್ದರು.
ಈ ವೇಳೆ ನಡೆದು ಹೋಗುತ್ತಿದ್ದ ತಂದೆ ಹಾಗೂ ಮಗಳನ್ನು ನಿಲ್ಲಿಸಿದ ಪೊಲೀಸ್ ಅಧಿಕಾರಿ ರಜಿತಾ ಅವರು ಪ್ರಶ್ನಿಸಲು ಶುರು ಮಾಡಿದ್ದಾರೆ. ಅಲ್ಲದೆ ತನ್ನ ಮೊಬೈಲ್ ಅನ್ನು ಕದ್ದಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ. ನಂತರ ಅಧಿಕಾರಿಯು ಮಗುವಿನ ಮೇಲೆ ಧ್ವನಿ ಎತ್ತಿದ್ದು, ಕಳ್ಳತನದ ಆರೋಪ ಮಾಡಿದ್ದಾರೆ. ಈ ವೇಳೆ ಅಧಿಕಾರಿಯ ಫೋನ್ ಬಾಲಕಿಯ ಬ್ಯಾಗ್ ನಲ್ಲಿ ಪತ್ತೆಯಾಗಿದೆ. ಇದರಿಂದ ಬಾಲಕಿಯು ಮಾನಸಿಕ ಆಘಾತಕ್ಕೊಳಗಾಗಿದ್ದಳು. ನ್ಯಾಯಾಲಯದಲ್ಲಿ ಇಡೀ ಘಟನೆಯ ದೃಶ್ಯಾವಳಿಗಳನ್ನು ಪರಿಶೀಲಿಸಲಾಯಿತು.
ಈ ಹಿಂದೆ ನ್ಯಾಯಾಲಯವು ಆದೇಶ ಹೊರಡಿಸಿದ್ದು, ಬಾಲಕಿಗೆ ಪರಿಹಾರ ನೀಡುವಂತೆ ಸರ್ಕಾರವಕ್ಕೆ ಸೂಚಿಸಿತ್ತು. ಆದರೆ, ಪ್ರಕರಣದಲ್ಲಿ ತಮಗೆ ಯಾವುದೇ ಹೊಣೆಗಾರಿಕೆ ಇಲ್ಲ ಎಂದು ಸರ್ಕಾರ ಉತ್ತರಿಸಿತ್ತು. ಸರ್ಕಾರದ ನಿಲುವನ್ನು ನ್ಯಾಯಾಲಯ ತಿರಸ್ಕರಿಸಿದ್ದಲ್ಲದೆ, 1.5 ಲಕ್ಷ ರೂ. ಪರಿಹಾರ ಮತ್ತು ಹೆಚ್ಚುವರಿ 25 ಸಾವಿರ ರೂ.ಗಳನ್ನು ನ್ಯಾಯಾಲಯದ ವೆಚ್ಚವಾಗಿ ನೀಡುವಂತೆ ಆದೇಶಿಸಿದೆ.
ತನಿಖೆ ಪೂರ್ಣಗೊಳ್ಳುವವರೆಗೆ ಅಧಿಕಾರಿ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವಂತೆ ಹಾಗೂ ಕಾನೂನು-ಸುವ್ಯವಸ್ಥೆ ಇಲಾಖೆಯಿಂದ ಸ್ಥಳಾಂತರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನ್ಯಾಯಾಲಯ ಸೂಚನೆ ನೀಡಿದೆ. ಅಲ್ಲದೆ, ಸಾರ್ವಜನಿಕರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದರ ಕುರಿತು ಅಧಿಕಾರಿಗೆ ತರಬೇತಿ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿದೆ.