ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಸಮಾಜದಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ತಡೆಗಟ್ಟಬೇಕಾದ ಪೊಲೀಸ್ ಅಧಿಕಾರಿಯೇ ಕಳವು ಮಾಡಿದ್ದು, ಈತನ ಕೃತ್ಯ ಸಿಸಿ ಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ. ಇಂತಹದೊಂದು ಘಟನೆ ಕೇರಳದ ಕೊಟ್ಟಾಯಂ ನಲ್ಲಿ ನಡೆದಿದೆ.
ತನ್ನ ಕರ್ತವ್ಯ ಮುಗಿಸಿ ಸ್ಕೂಟರ್ ನಲ್ಲಿ ಮನೆಗೆ ತೆರಳುತ್ತಿದ್ದ ಪೊಲೀಸ್ ಅಧಿಕಾರಿ ಶಿಹಾಬ್ ಎಂಬಾತನ ಕಣ್ಣಿಗೆ ರಸ್ತೆ ಬದಿಯಲ್ಲಿ ಇರಿಸಿದ್ದ ಮಾವಿನಹಣ್ಣಿನ ಕ್ರೇಟ್ ಕಂಡಿದೆ. ಸುತ್ತಮುತ್ತ ಯಾರೂ ಇಲ್ಲದಿರುವುದನ್ನು ಗಮನಿಸಿದ ಆತ ತನ್ನ ಸ್ಕೂಟರ್ ನಿಲ್ಲಿಸಿ ಮಾವಿನ ಹಣ್ಣುಗಳನ್ನು ನಿಧಾನವಾಗಿ ತನ್ನ ವಾಹನದ ಡಿಕ್ಕಿಗೆ ತುಂಬಿಕೊಂಡಿದ್ದಾನೆ.
ಬರೋಬ್ಬರಿ 10 ಕೆಜಿಯಷ್ಟು ಮಾವಿನ ಹಣ್ಣುಗಳನ್ನು ಈತ ಕದ್ದಿದ್ದು, ಬಳಿಕ ಅಲ್ಲಿಂದ ತೆರಳಿದ್ದಾನೆ. ಮಾರನೇ ದಿನ ಬಂದ ಹಣ್ಣಿನ ಅಂಗಡಿ ಮಾಲೀಕರಿಗೆ ಕಳವು ಆಗಿರುವ ಸಂಗತಿ ಗೊತ್ತಾಗಿದೆ. ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿದ ವೇಳೆ ಪೊಲೀಸ್ ಅಧಿಕಾರಿ ಶಿಹಾಬ್ ಕೃತ್ಯ ಬಯಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಮುಜುಗರಕ್ಕೊಳಗಾದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಇದೀಗ ಆತನನ್ನು ಅಮಾನತುಗೊಳಿಸಿದ್ದಾರೆ.