ದಕ್ಷಿಣ ಕನ್ನಡ : ಜನರು ತಮಗಾದ ಅನ್ಯಾಯ ಸರಿಪಡಿಸಬೇಕೆಂದು ಪೊಲೀಸ್ ಠಾಣೆ ಮೆಟ್ಟಿಲು ಏರುತ್ತಾರೆ. ಆದರೆ, ಅಲ್ಲಿಯೇ ಸಮನ್ವಯತೆ ಹಾಗೂ ಹೊಂದಾಣಿಕೆಯ ಕೊರತೆ ಇದ್ದರೆ, ನ್ಯಾಯ ಸಿಗುವುದು ಕನಸೇ ಸರಿ. ಹೀಗೆ ಹೊಂದಾಣಿಕೆ ಇಲ್ಲದೆ ಸೇವೆ ನಿರ್ವಹಿಸುತ್ತಿದ್ದ ಸಿಬ್ಬಂದಿಗಳೆಲ್ಲರನ್ನೂ ವರ್ಗಾವಣೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.
ಇಲ್ಲಿಯ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿನ ಮಹಿಳಾ ಠಾಣೆಯ ಸಿಬ್ಬಂದಿಯನ್ನೇ ಈ ರೀತಿ ವರ್ಗಾವಣೆ ಮಾಡಲಾಗಿದೆ. ಈ ಠಾಣೆಯಲ್ಲಿ 32 ಜನ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದರು. ಈ ಪೈಕಿ 6 ಜನ ಪೊಲೀಸರು ಬೇರೆ ಬೇರೆ ಪ್ರಕರಣಗಳಲ್ಲಿ ಅಮಾನತು ಕೂಡ ಆಗಿದ್ದರು. ಈಗ ಎಲ್ಲರೂ ವರ್ಗಾವಣೆಗೊಂಡಿದ್ದಾರೆ.
ಈ ಠಾಣೆಯಲ್ಲಿ ನೊಂದವರಿಗೆ ನ್ಯಾಯ ಸಿಗುವುದು ಒಂದೆಡೆ ಇರಲಿ, ಅಲ್ಲಿ ಸೇವೆ ಸಲ್ಲಿಸುತ್ತಿದ್ದವರ ಮಧ್ಯೆಯೇ ವಿವಾದಗಳು ಹೆಚ್ಚಾಗಿದ್ದವು. ಇಲ್ಲಿ ಕರ್ತವ್ಯ ಲೋಪಗಳು ಕೂಡ ನಡೆದಿರುವುದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದ್ದವು. ಹೀಗಾಗಿಯೇ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹಾಗೂ ಕಾನೂನು ಸುವ್ಯವಸ್ಥಾ ವಿಭಾಗದ ಡಿಸಿಪಿ ಹರಿರಾಂ ಶಂಕರ್ ಶಿಸ್ತು ಕ್ರಮ ಕೈಗೊಂಡಿದ್ದಾರೆ.
ಹೀಗಾಗಿ 32 ಜನ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಕಮೀಷನರ್ ಆದೇಶ ಹೊರಡಿಸಿದ್ದಾರೆ. ಈ ಠಾಣೆಯ ಇನ್ಸ್ ಪೆಕ್ಟರ್ ಅಪಘಾತದಲ್ಲಿ ಗಾಯಗೊಂಡು ವಿಶ್ರಾಂತಿಯಲ್ಲಿರುವುದರಿಂದಾಗಿ ಸಿಸಿಆರ್ ಬಿ ವಿಭಾಗದ ಪೊಲೀಸ್ ನಿರೀಕ್ಷಕ ಸಿದ್ಧನಗೌಡ ಬಜಂತ್ರಿ ಅವರಿಗೆ ಪ್ರಭಾರ ಕರ್ತವ್ಯ ವಹಿಸಲಾಗಿದೆ.
ಈಗಾಗಲೇ ಈ ಠಾಣೆಗೆ 20 ಜನರನ್ನು ನೇಮಕ ಮಾಡಲಾಗಿದ್ದು, ಇಬ್ಬರು ಪಿಎಸ್ ಐ, ನಾಲ್ವರು ಹೆಡ್ ಕಾನ್ ಸ್ಟೇಬಲ್ ಸೇರಿದಂತೆ 16 ಜನ ಪೊಲೀಸ್ ಪೇದೆಗಳನ್ನು ನೇಮಕ ಮಾಡಲಾಗಿದೆ ಎಂದು ಪೊಲೀಸ್ ಕಮೀಷನರ್ ಶಶಿಕುಮಾರ್ ಹೇಳಿದ್ದಾರೆ.