ಪೊಲೀಸರ ಪ್ರಮುಖ ಬೇಡಿಕೆಯಾದ ಅಂತರ್ ಜಿಲ್ಲಾ ವರ್ಗಾವಣೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಇದರ ಬೆನ್ನಲ್ಲೇ ಈಗ ಅಧಿಸೂಚನೆ ಹೊರಡಿಸಲಾಗಿದೆ. ಹೀಗಾಗಿ ಎಸ್ಐ ಹುದ್ದೆಗಿಂತ ಕೆಳಹಂತದ ಪೊಲೀಸರು ಮತ್ತು ಆಡಳಿತ ಸಿಬ್ಬಂದಿಯ ಅಂತರ್ ಜಿಲ್ಲೆ, ಘಟಕ ಹಾಗೂ ವಲಯ ವರ್ಗಾವಣೆಗೆ ಅನುಕೂಲವಾಗಲಿದೆ.
ಈ ಹಿಂದೆ ಇದ್ದ ಅಂತರ್ ಜಿಲ್ಲಾ ವರ್ಗಾವಣೆ ನಿಯಮವನ್ನು 2021 ರಲ್ಲಿ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗೆ ತಿದ್ದುಪಡಿ ತಂದು ರಾಜ್ಯ ಸರ್ಕಾರ ರದ್ದುಗೊಳಿಸಿದ ಕಾರಣ ಪೊಲೀಸರಿಂದ ವ್ಯಾಪಕ ಆಕ್ಷೇಪ ಕೇಳಿ ಬಂದಿತ್ತು. ಇದೀಗ ಹಳೆ ನಿಯಮವನ್ನು ಮರು ಜಾರಿಗೊಳಿಸುವ ಮೂಲಕ ಪೊಲೀಸರ ಬೇಡಿಕೆಗೆ ಸ್ಪಂದಿಸಲಾಗಿದೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಕರ್ನಾಟಕ ನಾಗರಿಕ ಸೇವಾ ನಿಯಮಗಳು 1977ರ ನಿಯಮ 16(ಎ) ಮರು ಜಾರಿಗೆ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಇದಕ್ಕೆ ಹಸಿರು ನಿಶಾನೆ ತೋರಿಸಲಾಗಿದೆ. ಅಂತರ ಜಿಲ್ಲಾ ವರ್ಗಾವಣೆ ಸಂದರ್ಭದಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವ ದಂಪತಿಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.