ಆಸ್ತಿ ವಿವಾದ ಉಂಟಾದ ಹಿನ್ನೆಲೆಯಲ್ಲಿ ಸ್ವಂತ ಪುತ್ರನೇ ತನ್ನ ತಂದೆಯ ಕೊಲೆಗೆ ಸುಫಾರಿ ನೀಡಿದ ಬೆಚ್ಚಿಬೀಳಿಸುವ ಘಟನೆಯು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಕಾತರಕಿ ಗ್ರಾಮದಲ್ಲಿ ನಡೆದಿದೆ. ತಂದೆ ವಿರುದ್ಧ ದ್ವೇಷ ಕಾರುತ್ತಿದ್ದ ಪುತ್ರ 1 ಲಕ್ಷ ರೂಪಾಯಿ ಸುಫಾರಿ ನೀಡಿ ತಂದೆಯ ಕೊಲೆ ಮಾಡಿಸಿದ್ದಾನೆ ಎನ್ನಲಾಗಿದೆ.
ಕೊಲೆಯಾದ ತಂದೆಯನ್ನು ಚೆನ್ನಪ್ಪ ವಜ್ರಮುಟ್ಟಿ ಎಂದು ಗುರುತಿಸಲಾಗಿದೆ. ಈತನ ಪುತ್ರ ಬಸವರಾಜನೇ ಭರಮಪ್ಪ ಜಂಬಗಿ, ಗೋಪಾಲ ರೊಡ್ಡಪನವರ್, ಪರಶುರಾಮ ಮಾದರ, ದುರ್ಗಪ್ಪ ಹುಗ್ಗಿ, ಮಾರುತಿ ಜಾನಮಟ್ಟಿ ಎಂಬವರಿಗೆ ಸುಫಾರಿ ನೀಡಿ ಕೊಲೆ ಮಾಡಿಸಿದ್ದಾನೆ ಎನ್ನಲಾಗಿದೆ.
ನವೆಂಬರ್ 19ರಂದು ಈ ಕೊಲೆ ಸ್ಕೆಚ್ ನಡೆದಿತ್ತು, ಕಟ್ಟಿಗೆಯಿಂದ ಚೆನ್ನಪ್ಪ ವಜ್ರಮುಟ್ಟಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ದುಷ್ಕರ್ಮಿಗಳು ಬಳಿಕ ಸ್ಥಳದಿಂದ ಎಸ್ಕೇಪ್ ಆಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಚೆನ್ನಪ್ಪರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ತಾನೇ ತಂದೆಯನ್ನು ಕೊಲೆ ಮಾಡಿಸಿದ್ದರೂ ಸಹ ಬಸವರಾಜ ಈ ಕೊಲೆಗೂ ತನಗೂ ಸಂಬಂಧವೇ ಇಲ್ಲ ಎಂಬಂತಿದ್ದ. ಆದರೆ ಬೀಳಗಿ ಪೊಲೀಸರ ತನಿಖೆಯಲ್ಲಿ ಬಸವರಾಜನ ಅಸಲಿ ಮುಖ ಹೊರಬಿದ್ದಿದೆ. ತಂದೆ ಹಾಗೂ ಮಗನ ನಡುವೆ ಮೂರು ಎಕರೆ ಜಾಗಕ್ಕಾಗಿ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ದ್ವೇಷದಿಂದ ಪುತ್ರ ಬಸವರಾಜು ತನ್ನ ತಂದೆಯ ಜೀವ ತೆಗೆದಿದ್ದಾನೆ. ಈ ಸಂಬಂಧ ಬಸವರಾಜ ಹಾಗೂ ಕೊಲೆಗಾರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.