ಮಂಗಳವಾರ ರಾತ್ರಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಅವರ ಅಂತ್ಯಕ್ರಿಯೆ ಬುಧವಾರದಂದು ನೆರವೇರಿದೆ. ಸ್ವಗ್ರಾಮ ನೆಟ್ಟಾರುವಿನಲ್ಲಿ ಅಂತ್ಯಕ್ರಿಯೆ ನೆರವೇರಿಸುವ ಮುನ್ನ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಗಿದೆ.
ಈ ಮೆರವಣಿಗೆ ವೇಳೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ನಾಯಕರು ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಕೊಲೆ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಗಿದೆ.
ಇದರ ಮಧ್ಯೆ ಪರಿಸ್ಥಿತಿ ಒಂದು ಹಂತದಲ್ಲಿ ಉದ್ವಿಗ್ನಗೊಂಡ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಆಗ ಕಾಸರಗೋಡಿನ ಪಿ. ರಮೇಶ್ ಯಾನೆ ಹುಬ್ಬಳ್ಳಿ ಈದ್ಗಾ ರಮೇಶ್ ಎಂಬವರು ಇದರ ವಿರುದ್ಧ ಎದೆಯೊಡ್ಡಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ.
ಹಲವು ವರ್ಷಗಳ ಹಿಂದೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಹೋರಾಟದಲ್ಲಿ ಇವರು ಮುಂಚೂಣಿಯಲ್ಲಿದ್ದ ಕಾರಣ ಈದ್ಗಾ ರಮೇಶ್ ಎಂಬ ಹೆಸರಿನಿಂದಲೇ ಇವರನ್ನು ಗುರುತಿಸಲಾಗುತ್ತಿದ್ದು, ಬುಧವಾರ ನಡೆದ ಘಟನೆಯಲ್ಲಿ ಪೊಲೀಸರು ಲಾಠಿಯಿಂದ ಥಳಿಸುತ್ತಿದ್ದರೂ ಸಹ ಅಲ್ಲಾಡದೆ ನಿಂತಿದ್ದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಾಠಿ ಬೀಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುತ್ತಿದೆ.