ರಾಯಚೂರು: ಪೊಲೀಸರನ್ನು ಕಂಡರೆ ಸಾಕು ಬಹುತೇಕರು ಅಂಜಿ, ನಿಂತಲ್ಲಿಯೇ ಬೆವರುತ್ತಾರೆ. ಆದರೆ, ಇಲ್ಲೊಂದು ಮಂಗ ಠಾಣೆಗೆ ನುಗ್ಗಿ ಪೊಲೀಸರನ್ನೇ ಹೆದರಿಸುತ್ತಿದೆ.
ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿಯೇ ಮಂಗವೊಂದು ಪೊಲೀಸರಿಗೆ ಉಪಟಳ ನೀಡುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಈ ಮಂಗ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರನ್ನು ಹೆದರಿಸುತ್ತಿದೆ.
ಈ ಕೋತಿ ಯಾವಾಗ ಬೇಕೆಂದಾಗ ಠಾಣೆಗೆ ನುಗ್ಗುತ್ತಿದೆ. ಪೊಲೀಸರು ಕುಳಿತುಕೊಳ್ಳುವ ಆಸನದತ್ತ ಹೋಗಿ ತೊಂದರೆ ಕೊಡುತ್ತಿದೆ. ಪೊಲೀಸರು ಇದನ್ನು ಓಡಿಸಲು ಎಷ್ಟೇ ಪ್ರಯತ್ನಿಸಿದರೂ ಮಂಗ ಮಾತ್ರ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದೆ.
ರಾತ್ರಿ ಪಾಳಯದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರಿಗೂ ಏಕಾಏಕಿ ನುಗ್ಗಿ ತೊಂದರೆ ಕೊಡುತ್ತಿದೆ. ಈ ಕುರಿತು ಠಾಣಾ ಸಿಬ್ಬಂದಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆದರೂ ಮಂಗ ಮಾತ್ರ ಯಾರ ಕೈಗೂ ಸಿಗದೆ ತನ್ನ ಉಪಟಳ ಮುಂದುವರೆಸಿದೆ.