ಬೆಂಗಳೂರು ನಗರದಲ್ಲಿ ಅಪಘಾತಗಳಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಪೊಲೀಸರು ಹಾಫ್ ಹೆಲ್ಮೆಟ್ ಚೆಕ್ ಮಾಡಲು ರಸ್ತೆಗೆ ಇಳಿದಿದ್ದಾರೆ. ಸಂಚಾರ ಹೆಚ್ಚಿರುವಂತ ಕೆ.ಆರ್. ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಿಂದ ಪೊಲೀಸರ ಜಾಗೃತಿ ಕಾರ್ಯ ಮುಂದುವರೆದಿದೆ.
ಹಾಫ್ ಹೆಲ್ಮೆಟ್ ಹಾಕಿಕೊಂಡು ರಸ್ತೆಯಲ್ಲಿ ಓಡಾಡುವ ದ್ವಿಚಕ್ರ ವಾಹನ ಸವಾರರನ್ನ ತಡೆಹಿಡಿದು, ಎಲ್ಲರನ್ನು ಒಂದೆಡೆ ಸೇರಿಸಿ ಸಂಪೂರ್ಣ ಸುರಕ್ಷೆ ನೀಡುವ ಹೆಲ್ಮೆಟ್ ಹಾಗೂ ಹಾಫ್ ಹೆಲ್ಮೆಟ್ ಗೂ ಇರುವ ವ್ಯತ್ಯಾಸ ತಿಳಿಸುತ್ತಿದ್ದಾರೆ. ಇಂದು ಬೆಳಗ್ಗೆಯಿಂದ ಸುಮಾರು 70 ವಾಹನ ಸವಾರರನ್ನು ಹಿಡಿದು ಹಾಫ್ ಹೆಲ್ಮೆಟ್ ಧರಿಸಬೇಡಿ ಎಂದು ಪಾಠ ಮಾಡಿದ್ದಾರೆ.
ಪೊಲೀಸರ ಈ ಜಾಗೃತಿ ಕಾರ್ಯಕ್ಕೆ ವಾಹನ ಸವಾರರು ಸೇರಿದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮಲ್ಲಿ ಜಾಗೃತಿ ಮೂಡಿಸುವ ಇವರು ಮೊದಲೇ ಜಾಗೃತರಾಗಿ ಈ ರೂಲ್ಸ್ ಮಾಡಬೇಕಿತ್ತು. ಬೆಂಗಳೂರಿನಲ್ಲಿ ಈ ನಿಯಮಗಳ ಅವಶ್ಯಕತೆ ಇಲ್ಲ. ಹಾಫ್ ಹೆಲ್ಮೆಟ್ ಧರಿಸಬೇಡಿ ಅಂತಾ ನಮಗೆ ಹೇಳುವ ಬದಲು, ಅವುಗಳನ್ನ ತಯಾರಿಸುವ ಮಾಲೀಕರಿಗೆ ಹೇಳಲಿ. ಹಾಫ್ ಹೆಲ್ಮೆಟ್ ಗಳು ತಯಾರಾಗುತ್ತಿರೋದಕ್ಕೆ ನಾವು ಖರೀದಿ ಮಾಡುತ್ತಿರುವುದು, ಇಲ್ಲ ಅಂದ್ರೆ ನಾವ್ಯಾಕೆ ಖರೀದಿ ಮಾಡ್ತೀವಿ. ನಾವುಗಳು ಸಾವಿರಾರು ರೂಪಾಯಿ ಕೊಟ್ಟು ಹೆಲ್ಮೆಟ್ ಖರೀದಿಸುವಾಗ ಇಲ್ಲದೇ ಇರೋ ನಿಯಮಗಳು ಇವಾಗ ಯಾಕೆ. ಟ್ಯಾಕ್ಸ್ ಸೇರಿ ಒಳ್ಳೆ ಕಂಪನಿಯ ಹೆಲ್ಮೆಟ್ ಗೆ 1500 ರೂಪಾಯಿ ಕೊಡ್ತಿವಿ ಈಗ ಆ ಹೆಲ್ಮೆಟ್ ತೆಗೆದು ಹಾಕಿ ಅಂದ್ರೆ ಹೇಗೆ. ಹಾಫ್ ಹೆಲ್ಮೆಟ್ನಿಂದ ತೊಂದರೆಯಾಗೋದಾದ್ರೆ ಮೊದಲೇ ಬ್ಯಾನ್ ಮಾಡಬೇಕಿತ್ತು ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.