ಮದುವೆ ಮನೆಯಲ್ಲಿ ಊಟಕ್ಕೆ ಪೈನಾಪಲ್ ಗೊಜ್ಜನ್ನು ಹಾಕುತ್ತಾರೆ. ಬಾಳೆಲೆಗೆ ಬೀಳುವ ಈ ಹುಳಿ-ಸಿಹಿ ಗೊಜ್ಜು ಎಂದರೆ ಸಾಕಷ್ಟು ಜನರಿಗೆ ಇಷ್ಟ. ಇದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ.
ಎರಡು ಕಪ್ ಪೈನಾಪಲ್ ಹಣ್ಣುಗಳ ಹೋಳುಗಳನ್ನು ತೆಗೆದಿಟ್ಟುಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 2 ಟೇಬಲ್ ಸ್ಪೂನ್ ಕಡಲೆಬೇಳೆ, 2 ಟೇಬಲ್ ಸ್ಪೂನ್ ಉದ್ದಿನಬೇಳೆ, 1 ಟೀ ಸ್ಪೂನ್ ಸಾಸಿವೆ , ¼ ಟೀ ಚಮಚದಷ್ಟು ಮೆಂತೆಕಾಳು, 4 ಬ್ಯಾಡಗಿ ಮೆಣಸು ಹಾಕಿ ಕೆಂಪಗಾಗುವವರೆಗೆ ಫ್ರೈ ಮಾಡಿಕೊಳ್ಳಿ. ನಂತರ ಅರ್ಧ ಕಪ್ ಕೊಬ್ಬರಿ ತುರಿ, ಅರ್ಧ ಕಪ್ ಹಸಿ ಕಾಯಿತುರಿ ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿ ಗ್ಯಾಸ್ ಆಫ್ ಮಾಡಿ. ನಂತರ ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 3 ಕಪ್ ನೀರು ಹಾಕಿ ಕುದಿಯಲು ಆರಂಭಿಸಿದಾಗ ಅದಕ್ಕೆ ಪೈನಾಪಲ್ ತುಂಡುಗಳನ್ನು ಹಾಕಿ ಸ್ವಲ್ಪ ಕೈಯಾಡಿಸಿ ಒಂದು ಮುಚ್ಚಳ ಮುಚ್ಚಿ ಗ್ಯಾಸ್ ಆಫ್ ಮಾಡಿ.
ನಂತರ ಒಂದು ಮಿಕ್ಸಿ ಜಾರಿಗೆ ಹುರಿದಿಟ್ಟುಕೊಂಡ ಮಸಾಲೆ ಪದಾರ್ಥ, ಹಾಗೇ ಒಂದು ಸಣ್ಣ ತುಂಡು ಹುಣಸೆಹಣ್ಣು ನೀರಿನಲ್ಲಿ ನೆನೆಸಿಟ್ಟಿದ್ದನ್ನು ಹಾಕಿ ಸ್ವಲ್ಪ ನೀರು ಸೇರಿಸಿ ನಯವಾಗಿ ರುಬ್ಬಿಕೊಂಡು ಒಂದು ಪಾತ್ರೆಗೆ ತೆಗೆದುಕೊಂಡು ಅದಕ್ಕೆ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಪೈನಾಪಲ್ ಅನ್ನು ಸೇರಿಸಿ. ನಂತರ ಒಂದು ಒಗ್ಗರಣೆ ಪಾತ್ರೆ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ, ಸಾಸಿವೆ ಕರಿಬೇವು, ಒಣಮೆಣಸು ಹಾಕಿ ಅದನ್ನು ಪೈನಾಪಲ್ ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿ ಸರ್ವ್ ಮಾಡಿ.