ಪಾಕಿಸ್ತಾನದ ಪೇಶಾವರದ ಮಸೀದಿಯಲ್ಲಿ ನಿನ್ನೆ 50ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾದ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ಸ್ ಹೊತ್ತುಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪೇಶಾವರದಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಇಬ್ಬರು ಭಯೋತ್ಪಾದಕರು ಗುಂಡು ಹಾರಿಸಿದ ಬಳಿಕ ಮಸೀದಿಯೊಳಗೆ ಬಾಂಬ್ ಸ್ಫೋಟಗೊಂಡಿತ್ತು. ಇವರಲ್ಲಿ ಒಬ್ಬರು ಕಟ್ಟಡದ ಒಳಗೆ ಪ್ರವೇಶಿಸಿ ಸ್ಫೋಟ ನಡೆಸಿದ್ದರು. ಈ ದಾಳಿಯಲ್ಲಿ 57 ಮಂದಿ ಸಾವನ್ನಪ್ಪಿದ್ದರೆ 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಶುಕ್ರವಾರದ ಪ್ರಾರ್ಥನೆಯನ್ನು ಸಲ್ಲಿಸಲು ಮುಸ್ಲಿಮರು ಕುಚಾ ರಿಸಲ್ದಾರ್ ಮಸೀದಿಯಲ್ಲಿ ಸೇರಿದ್ದ ವೇಳೆಯಲ್ಲಿ ಈ ಸ್ಫೋಟ ಸಂಭವಿಸಿತ್ತು. ಗಾಯಾಳುಗಳನ್ನು ಲೇಡಿ ರೀಡಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿಯ ಸಲಹೆಗಾರ ಮುಹಮ್ಮದ್ ಅಲಿ ಸೈಫ್ ಈ ವಿಚಾರವಾಗಿ ಮಾತನಾಡಿದ್ದು ಭಯೋತ್ಪಾದಕರು ಮೊದಲು ಮಸೀದಿಗೆ ಪ್ರವೇಶಿಸಲು ಪ್ರಯತ್ನಿಸಿದರು ಮತ್ತು ಪೊಲೀಸರೊಂದಿಗೆ ಗುಂಡಿನ ಚಕಮಕಿ ನಡೆಸಿದರು ಎಂದು ಹೇಳಿದ್ದಾರೆ.