ಚಂಡೀಗಢ: ಪೇಟಾ ಧರಿಸುವುದರಿಂದ ಯಾರೂ ಸರ್ದಾರ್ ಆಗಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾದ್ರಾ ವ್ಯಂಗ್ಯವಾಡಿದ್ದಾರೆ.
2022ರ ಪಂಜಾಬ್ ಚುನಾವಣೆಗೆ ಮುಂಚಿತವಾಗಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಈ ಪಕ್ಷಗಳಿಗೆ ಪಂಜಾಬ್, ಪಂಜಾಬಿಗಳಿಗೆ ಸೇರಿದ್ದು ಎಂಬುದನ್ನು ಮನದಟ್ಟು ಮಾಡಬೇಕು ಅಂತಾ ಹೇಳಿದ್ದಾರೆ. ಅಲ್ಲದೆ, ಸೋಮವಾರ ಜಲಂಧರ್ ರ್ಯಾಲಿಯಲ್ಲಿ ಪೇಟಾ ತೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪೇಟಾ ಧರಿಸುವುದರಿಂದ ಯಾರು ಕೂಡ ಸರ್ದಾರ್ ಆಗುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿ ಹಾಗೂ ಆಮ್ ಆದ್ಮಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ಒಂದು ಪಕ್ಷ ಗುಜರಾತ್ ಮಾದರಿಯ ಬಗ್ಗೆ ಮಾತನಾಡುತ್ತಿದ್ದರೆ, ಇನ್ನೊಂದು ದೆಹಲಿ ಮಾದರಿಯ ಬಗ್ಗೆ ಮಾತನಾಡುತ್ತದೆ. ಗುಜರಾತ್ ಮಾದರಿಯಲ್ಲಿ ಯಾರಿಗೂ ಕೆಲಸ ಸಿಕ್ಕಿಲ್ಲ, ಯಾರ ವ್ಯವಹಾರವೂ ಸರಿಯಾಗಿ ನಡೆಯುತ್ತಿಲ್ಲ, ಯಾರಿಗೂ ಯಾವುದೇ ನೆರವು ಕೂಡ ಸಿಕ್ಕಿಲ್ಲ. ಅದೇ ರೀತಿ ದೆಹಲಿ ಮಾದರಿಯಲ್ಲಿ ಯಾವುದೇ ಹೊಸ ಆಸ್ಪತ್ರೆ ಅಥವಾ ಶಿಕ್ಷಣ ಸಂಸ್ಥೆಯನ್ನು ನಿರ್ಮಿಸಲಾಗಿಲ್ಲ. ಹೊಸ ಉದ್ಯೋಗಗಳು ಕೂಡ ಸೃಷ್ಟಿಯಾಗಿಲ್ಲ ಎಂದು ಕಿಡಿಕಾರಿದ್ದಾರೆ.
ಶಾಂತಿ ಮತ್ತು ಸೌಹಾರ್ದತೆ ಅತಿ ಮುಖ್ಯ: ರಾಹುಲ್ ಗಾಂಧಿ
ಪಂಜಾಬ್‌ನಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವುದು ಅತಿ ಮುಖ್ಯ ಎಂದು ಮಾನ್ಸಾದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಪಂಜಾಬ್ ಚುನಾವಣೆ 2022 ರ ಚುನಾವಣಾ ಫಲಿತಾಂಶಗಳನ್ನು ಮಾರ್ಚ್ 10 ರಂದು ಪ್ರಕಟಿಸಲಾಗುವುದು. ಕಾಂಗ್ರೆಸ್ ಪಕ್ಷವು ಸಿಎಂ ಅಭ್ಯರ್ಥಿ ಚರಂಜಿತ್ ಸಿಂಗ್ ಚನ್ನಿ ನೇತೃತ್ವದಲ್ಲಿ ಮರುಚುನಾವಣೆಗೆ ತಯಾರಿ ನಡೆಸುತ್ತಿದ್ದು, ಆಮ್ ಆದ್ಮಿ ತನ್ನ ಸಿಎಂ ಅಭ್ಯರ್ಥಿಯಾಗಿ ಭಗವಂತ್ ಮಾನ್ ಅವರನ್ನು ಕಣಕ್ಕಿಳಿಸಿದೆ.