ಬಿಲ್ ಕೇಳಿದ್ದಕ್ಕೆ ಡಾಬಾಗೆ ಪೆಟ್ರೊಲ್ ಸುರಿದಿದ್ದ ದುರ್ಘಟನೆಯಲ್ಲಿ ಗಾಯಗೊಂಡಿದ್ದ ಸಪ್ಲೈಯರ್, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮೃತ ಮನೋಜ್ ಗೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಘಟನೆಯಲ್ಲಿ ಮನೋಜ್ ದೇಹಕ್ಕೆ 30% ನಷ್ಟು ಸುಟ್ಟ ಗಾಯಗಳಾಗಿತ್ತು. ಆದರೆ ಮಂಗಳವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಹಾಸನ ಮೂಲದ 29 ವರ್ಷದ ಮನೋಜ್ ಕೊನೆಯುಸಿರೆಳೆದಿದ್ದಾನೆ.
ನಗರದ ಹೆಸರಘಟ್ಟದ ಬಳಿಯಿರುವ ಬ್ಯಾಲಕೆರೆಯ ಯೂಟರ್ನ್ ಡಾಬಾದಲ್ಲಿ ಈ ಕೃತ್ಯ ನಡೆದಿದೆ. ಡಿ 23ರ ರಾತ್ರಿ ಇಬ್ಬರು ವ್ಯಕ್ತಿಗಳು ಊಟಕ್ಕೆ ಬಂದಿದ್ದರು. ಊಟ ಮಾಡಿ ಬಹಳ ಹೊತ್ತು ಮಾತನಾಡುತ್ತಾ ಕುಳಿತಿದ್ದಾಗ ಡಾಬಾದ ಸಿಬ್ಬಂದಿ ಬಾಗಿಲು ಮುಚ್ಚಬೇಕು, ಬಿಲ್ ಪಾವತಿ ಮಾಡಿ ಎಂದು ಕೇಳಿದ್ದಾರೆ.
ಎರಡನೆ ಮಗುವಿಗೆ ತಂದೆಯಾದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್
ಇದರಿಂದ ಆಕ್ರೋಶಗೊಂಡ ವ್ಯಕ್ತಿಗಳು ಸಪ್ಲೈಯರ್ ಜೊತೆ ಜಗಳ ಆಡಿ ಅಲ್ಲಿಂದ ತೆರಳಿದ್ದಾರೆ. ನಂತರ, ಮಧ್ಯರಾತ್ರಿ ಸುಮಾರು 12.30ರ ವೇಳೆಗೆ ಡಾಬಾ ಬಳಿ ದ್ವಿಚಕ್ರ ವಾಹನದಲ್ಲಿ ಮರಳಿ ಬಂದ ಅವರು, ಡಾಬಾ ಬಾಗಿಲಿಗೆ ಚಿಲಕ ಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು.
ಡಾಬಾದ ಒಳಗಡೆ ಊಟ ಮಾಡುತ್ತಿದ್ದ ಮನೋಜ್ ಬೆಂಕಿಯನ್ನು ಕಂಡು ಶಾರ್ಟ್ ಸರ್ಕೀಟ್ ಆಗಿರಬಹುದು ಎಂದು ಭಾವಿಸಿ ಬಾಗಿಲ ಬಳಿಗೆ ಓಡಿ ಬಂದಿದ್ದರು. ಈ ವೇಳೆ ಆರೋಪಿಗಳು ಎರಚುತ್ತಿದ್ದ ಪೆಟ್ರೋಲ್ ಮನೋಜ್ ಮೇಲೆ ಬಿದ್ದು, ಆತನ ಮೈಗೂ ಬೆಂಕಿ ಹತ್ತಿಕೊಂಡಿತ್ತು. ಕೂಡಲೇ ಡಾಬಾದ ಇತರ ಸಿಬ್ಬಂದಿ ಮನೋಜ್ ಮೈಗೆ ತಾಗಿದ್ದ ಬೆಂಕಿ ನಂದಿಸಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.