ಅಬ್ಬಬ್ಬಾ ಗಗನಕ್ಕೇರುತ್ತಿದ್ದ ತೈಲ ಬೆಲೆ ಕೊಂಚ ಇಳಿಯುತ್ತದಲ್ಲಾ ಎಂದು ದೇಶದ ನಾಗರಿಕರು ನಿಟ್ಟುಸಿರುವ ಬಿಡುವಂತಾಗಿದೆ. ಕೇಂದ್ರ ಸರ್ಕಾರ ತೈಲದ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಪೆಟ್ರೋಲ್ ಗೆ 8 ರೂಪಾಯಿ ಮತ್ತು ಡೀಸೆಲ್ ಗೆ 6 ರೂಪಾಯಿಯನ್ನು ಕಡಿತ ಮಾಡಿದೆ. ಈ ಮೂಲಕ ಹಣದುಬ್ಬರಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡಿದೆ.
ಹಣದುಬ್ಬರ ದರ ಏರುತ್ತಿದ್ದುದರಿಂದ ಎದುರಾಗಬಹುದಾದ ಆರ್ಥಿಕ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಸರ್ಕಾರದ ಈ ನಿರ್ಧಾರಗಳನ್ನು ಘೋಷಣೆ ಮಾಡಿದ್ದಾರೆ.
ಈ ನಿರ್ಧಾರದಿಂದ ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 9.5 ರೂಪಾಯಿ ಮತ್ತು ಡೀಸೆಲ್ ದರದಲ್ಲಿ 7 ರೂಪಾಯಿ ಕಡಿಮೆಯಾಗಲಿದೆ. ಇದರಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 1 ಲಕ್ಷ ಕೋಟಿ ರೂಪಾಯಿ ಹೊರೆಯಾಗಲಿದೆ. ಆದರೆ, ದೇಶದ ನಾಗರಿಕರಿಗೆ ಪ್ರಯೋಜನ ನೀಡುವ ದಿಸೆಯಲ್ಲಿ ಸುಂಕವನ್ನು ಕಡಿಮೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಈ ನಿರ್ಧಾರದ ಬಳಿಕ ಇದೀಗ ಎಲ್ಲಾ ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿನ ಸುಂಕವನ್ನು ಇಳಿಕೆ ಮಾಡಿ ಜನರಿಗೆ ನೆರವಾಗಬೇಕೆಂದು ಅವರು ಹೇಳಿದ್ದಾರೆ.
ಇದೇ ವೇಳೆ ಅಡುಗೆ ಅನಿಲದ ದರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಒಂದು ವರ್ಷದಲ್ಲಿ 12 ಸಿಲಿಂಡರ್ ಗಳಿಗೆ ಉಜ್ವಲ ಯೋಜನೆಯಡಿ ಪ್ರತಿ ಸಿಲಿಂಡರ್ ಗೆ 200 ರೂಪಾಯಿಗಳ ಸಬ್ಸಿಡಿಯನ್ನು ನೀಡುತ್ತಿದೆ. ಅಲ್ಲದೇ, ಸಿಮೆಂಟ್ ಮತ್ತು ಲಾಜಿಸ್ಟಿಕ್ ಪೂರೈಕೆ, ಬೆಲೆ ಇಳಿಕೆಗೂ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಸುಂಕ ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ 111.09 ರೂಪಾಯಿಗಳಿಂದ 101.59 ರೂಪಾಯಿಗೆ ಇಳಿದಿದ್ದರೆ, ಡೀಸೆಲ್ ಪ್ರತಿ ಲೀಟರ್ ಗೆ 94.79 ರೂಪಾಯಿಯಿಂದ 87.79 ರೂಪಾಯಿಗೆ ಇಳಿಕೆಯಾಗಲಿದೆ.