ಬೆಳಿಗ್ಗೆ ತಿಂಡಿಗೆ ಇಡ್ಲಿ, ಪೂರಿ ಮಾಡುತ್ತೇವೆ. ಇದನ್ನು ತಿನ್ನುವುದಕ್ಕೆ ಏನು ಸಾಂಬಾರು ಮಾಡಲಿ ಎಂದು ತಲೆಬಿಸಿ ಮಾಡಿಕೊಳ್ಳುತ್ತೇವೆ.
ಗಡಿಬಿಡಿಯಲ್ಲಿರುವಾಗ ಸಾಂಬಾರಿಗಾಗಿ ತುಂಬಾ ಸಮಯ ತೆಗೆದುಕೊಳ್ಳುವುದಕ್ಕೆ ಆಗಲ್ಲ. ಹಾಗಾಗಿ ಇಲ್ಲಿ ಸುಲಭವಾಗಿ ಮಾಡುವ ಬಾಂಬೆ ಸಾಂಬಾರು ವಿಧಾನ ಇಲ್ಲಿದೆ ನೋಡಿ.
ಸಾಂಬಾರು ಈರುಳ್ಳಿ-10, ಸಣ್ಣದ್ದಾಗಿ ಕತ್ತರಿಸಿಕೊಂಡ ಟೊಮೆಟೊ-1, ಹಸಿಮೆಣಸು-ಎರಡು, ಶುಂಠಿ-1 ಇಂಚು, ಬೆಳ್ಳುಳ್ಳಿ-5 ಎಸಳು, 1 ಟೇಬಲ್ ಸ್ಪೂನ್-ಕಡಲೆಹಿಟ್ಟು, ¾ ಟೀ ಸ್ಪೂನ್ ಬೆಲ್ಲ, 1 ½ ಕಪ್ ನೀರು, ¼ ಅರಿಶಿನ ಪುಡಿ, 1 ಟೀ ಸ್ಪೂನ್-ಖಾರದಪುಡಿ, 2 ಟೇಬಲ್ ಚಮಚ-ಎಣ್ಣೆ, 1 ಟೀ ಸ್ಪೂನ್-ಸಾಸಿವೆ, 1 ಟೀ ಸ್ಪೂನ್-ಉದ್ದಿನಬೇಳೆ, 1 ಟೀ ಸ್ಪೂನ್-ಜೀರಿಗೆ, ¼ ಟೀ ಸ್ಪೂನ್-ಮೆಂತೆ, 1-ಕೆಂಪು ಮೆಣಸಿನಕಾಯಿ, 1 ಚಿಟಿಕೆ-ಇಂಗು, 5 ಎಸಳು ಕರಿಬೇವು, ಕೊತ್ತಂಬರಿಸೊಪ್ಪು ಸ್ವಲ್ಪ.
ಮೊದಲಿಗೆ ಒಂದು ಪಾತ್ರೆಗೆ ಕಡಲೆಹಿಟ್ಟು ಹಾಕಿ ಅದಕ್ಕೆ ಸ್ವಲ್ಪ ನೀರು ಸೇರಿಸಿ ಗಂಟು ಇಲ್ಲದಂತೆ ಚೆನ್ನಾಗಿ ಕಲಸಿ. ನಂತರ ಇದಕ್ಕೆ 1 ½ ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಗ್ಯಾಸ್ ಮೇಲೆ ಬಾಣಲೆ ಇಟ್ಟು ಅದಕ್ಕೆ 2 ಟೇಬಲ್ ಸ್ಪೂನ್ ಎಣ್ಣೆ ಹಾಕಿ. ನಂತರ ಅದಕ್ಕೆ ಸಾಸಿವೆ ಉದ್ದಿನಬೇಳೆ, ಜೀರಿಗೆ, ಮೆಂತೆಕಾಳು, ಕೆಂಪು ಮೆಣಸಿನ ಕಾಯಿ, ಇಂಗು ಸೇರಿಸಿ. ನಂತರ ಇದಕ್ಕೆ ಈರುಳ್ಳಿ, ಹಸಿಮೆಣಸು, ಬೆಳ್ಳುಳ್ಳಿ, ಕರಿಬೇವು ಹಾಕಿ ಚೆನ್ನಾಗಿ ಕೈಯಾಡಿಸಿ.
ನಂತರ ಟೊಮೆಟೊ ಹಾಕಿ ಆಮೇಲೆ ಅರಿಶಿನ, ಉಪ್ಪು, ಖಾರದಪುಡಿ ಹಾಕಿ. ಟೊಮೆಟೊ ಮೆತ್ತಗಾದ ನಂತರ ಇದಕ್ಕೆ 1 ಟೇಬಲ್ ಸ್ಪೂನ್ ನೀರು ಸೇರಿಸಿ. ಟೊಮೆಟೊ ಬೆಂದ ನಂತರ ಇದಕ್ಕೆ ಕಡಲೇ ಹಿಟ್ಟು ಸೇರಿಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಿಕೊಳ್ಳಿ. ನಂತರ ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಬಾಂಬೆ ಸಾಂಬಾರು ರೆಡಿ.