ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ: ದಿ ರೈಸ್’ ದಾಖಲೆಗಳ ಮೇಲೆ ದಾಖಲೆ ಮಾಡುತ್ತಿದೆ. ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿರುವ ಈ ಚಿತ್ರ ಇನ್ನೂ ಸಹ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಲ್ಲದೆ ದಕ್ಷಿಣ ಭಾರತದ ಈ ಚಿತ್ರ ಉತ್ತರ ಭಾರತದಲ್ಲೂ ಭರ್ಜರಿ ಯಶಸ್ಸು ಕಾಣುವ ಮೂಲಕ ಬಾಲಿವುಡ್ ಮಂದಿಯನ್ನು ಅಚ್ಚರಿಗೀಡು ಮಾಡಿದೆ.
ಇದೀಗ ‘ಪುಷ್ಪ’ ಮುಡಿಗೆ ಮತ್ತೊಂದು ಗರಿ ಸೇರ್ಪಡೆಯಾಗಿದ್ದು, ಭಾನುವಾರದಂದು ಈ ಚಿತ್ರ ದಾದಾ ಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಸಮಾರಂಭದ ಸಂದರ್ಭದಲ್ಲಿ ‘ಫಿಲ್ಮ್ ಆಫ್ ದಿ ಇಯರ್’ ಪ್ರಶಸ್ತಿಗೆ ಪಾತ್ರವಾಗಿದೆ. ಇದನ್ನು ದಾದಾ ಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸಮಿತಿಯು ತನ್ನ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿದೆ.
ರಕ್ತಚಂದನ ಕಳ್ಳಸಾಗಾಣಿಕೆದಾರರ ಕಥಾ ಹಂದರವನ್ನು ಹೊಂದಿರುವ ಈ ಚಿತ್ರವನ್ನು ಸುಕುಮಾರ್ ನಿರ್ದೇಶಿಸಿದ್ದು, ನವೀನ್ ಯರ್ನೆನಿ ಹಾಗೂ ರವಿಶಂಕರ್ ತಮ್ಮ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿ ಮುತ್ತಮ್ಮಶೆಟ್ಟಿ ಮೀಡಿಯಾ ಸಹಯೋಗದಲ್ಲಿ ನಿರ್ಮಿಸಿದ್ದರು. ಡಿಸೆಂಬರ್ 17ರಂದು ಬಿಡುಗಡೆಗೊಂಡ ಈ ಚಿತ್ರ ಭರ್ಜರಿ ಯಶಸ್ಸು ಕಂಡಿದ್ದು, ಒಟಿಟಿ ಪ್ಲಾಟ್ಫಾರ್ಮ್ ಅಮೆಜಾನ್ ನಲ್ಲೂ ಸಹ ಇದು ಸದ್ದು ಮಾಡುತ್ತಿದೆ.