ಇಟಲಿಯ ವ್ಯಕ್ತಿಯೊಬ್ಬನಿಗೆ ಒಮ್ಮೆಲೇ ಕೋವಿಡ್, ಮಂಕಿಪಾಕ್ಸ್ ಮತ್ತು ಎಚ್‌ಐವಿ ಸೋಂಕು ತಗುಲಿದೆ. ಜುಲೈನಲ್ಲಿ ಈತ ಸ್ಪೇನ್‌ಗೆ ಪ್ರವಾಸ ಹೋಗಿದ್ದ. ಅಲ್ಲಿ ಅಸುರಕ್ಷಿತ ಲೈಂಗಿಕ ಸಂಬಂಧ ಹೊಂದಿದ್ದಾನೆ. ಪರಿಣಾಮ ಆತನಿಗೆ SARS-CoV-2, ಮಂಕಿಪಾಕ್ಸ್ ಮತ್ತು HIV ಈ ಮೂರೂ ಸೋಂಕುಗಳು ತಗುಲಿವೆ. ಈ ಮೂರು ವೈರಸ್‌ಗಳನ್ನು ಒಮ್ಮೆಲೇ ಹೊಂದಿರುವ ಪ್ರಪಂಚದ ಮೊದಲ ರೋಗಿ ಎನಿಸಿಕೊಂಡಿದ್ದಾನೆ.
ಮಂಕಿಪಾಕ್ಸ್ ಇತ್ತೀಚಿನ ದಿನಗಳಲ್ಲಿ ಅತ್ಯಂತ ವೇಗವಾಗಿ ಹರಡುತ್ತಿರುವ ಸೋಂಕು. ಚರ್ಮದ ಗಾಯಗಳು, ವೈರಸ್‌ನಿಂದ ಕಲುಷಿತಗೊಂಡ ವಸ್ತುಗಳು, ಸೆಮಿನಲ್ ದ್ರವಗಳು ಮತ್ತು ಗಂಟಲಿನ ಸ್ರವಿಸುವಿಕೆ, ಸಾಂಕ್ರಾಮಿಕ ವಸ್ತುಗಳೊಂದಿಗೆ ನಿಕಟ ಸಂಪರ್ಕದ ಮಂಕಿಪಾಕ್ಸ್ ಹರಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸಂಭೋಗದಿಂದ ಮಂಕಿಪಾಕ್ಸ್ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬುದು ಸಂಶೋಧನೆಯಲ್ಲಿ ಈಗಾಗ್ಲೇ ದೃಢಪಟ್ಟಿದೆ.
ಮೂರೂ ಸೋಂಕಿಗೆ ತುತ್ತಾದ 36 ವರ್ಷದ ಯುವಕ ಜೂನ್ ತಿಂಗಳಿನಲ್ಲಿ ಸ್ಪೇನ್‌ಗೆ ತೆರಳಿದ್ದ. ಅಲ್ಲಿ 5 ದಿನಗಳನ್ನು ಕಳೆದಿದ್ದಾನೆ. ಪ್ರವಾಸ ಮುಗಿಸಿ ಮನೆಗೆ ಮರಳಿ ಸುಮಾರು 9 ದಿನಗಳ ಬಳಿಕ ಆತನಿಗೆ ಜ್ವರ ಕಾಣಿಸಿಕೊಂಡಿದೆ. ಗಂಟಲು ನೋವು, ಆಯಾಸ, ತಲೆನೋವು ಜೊತೆಗೆ ತೊಡೆಸಂದಿನಲ್ಲಿ ಉರಿಯೂತ ಶುರುವಾಗಿದೆ. ಕೂಡಲೇ ಆತ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾನೆ. ಅದು ಪಾಸಿಟಿವ್ ಬಂದಿದೆ. ಒಂದು ದಿನ ಕಳೆಯುವಷ್ಟರಲ್ಲಿ ಎಡಗೈ ಮೇಲೆ ಬೊಬ್ಬೆಗಳೆದ್ದಿವೆ. ನಂತರ ಕೈಕಾಲುಗಳು, ಮುಖ ಮತ್ತು ಹಿಂಭಾಗದಲ್ಲಿ ಸಣ್ಣ ಸಣ್ಣ ನೋವಿನ ಗುಳ್ಳೆಗಳು ಕಾಣಿಸಿಕೊಂಡವು.
ಗುಳ್ಳೆಗಳಲ್ಲಿ ಕೀವು ತುಂಬಿಕೊಂಡು ಅದು ದೇಹದ ತುಂಬೆಲ್ಲ ಹರಡಲಾರಂಭಿಸಿತು. ಕೂಡಲೇ ಆತನನ್ನು ಇಟಲಿಯ ಕೆಟಾನಿಯಾದಲ್ಲಿರೋ ಯೂನಿವರ್ಸಿಟಿ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ಘಟಕಕ್ಕೆ ವರ್ಗಾಯಿಸಲಾಯಿತು. ಈ ವೇಳೆ ತಾನು ಸ್ಪೇನ್‌ನಲ್ಲಿ ಪುರುಷರೊಂದಿಗೆ ಅಸುರಕ್ಷಿತ ಸಂಭೋಗ ನಡೆಸಿದ್ದಾಗಿ ಆತ ಬಹಿರಂಗಪಡಿಸಿದ್ದಾನೆ. ಕೂಡಲೇ ಮಂಕಿಪಾಕ್ಸ್ ಟೆಸ್ಟ್ ಮಾಡಲಾಯ್ತು. ಅದರ ವರದಿ ಸಹ ಪಾಸಿಟಿವ್ ಬಂದಿತ್ತು. 20 ದಿನಗಳ ನಂತರವೂ ಮಂಕಿಪಾಕ್ಸ್ ಟೆಸ್ಟ್ ಪಾಸಿಟಿವ್ ಬರುತ್ತಲೇ ಇತ್ತು. ಚಿಕಿತ್ಸೆಯ ಬಳಿಕ ಹಲವು ದಿನಗಳವರೆಗೂ ಸೋಂಕು ಹಾಗೇ ಇರಬಹುದು ಅಂತಾ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಆ ಯುವಕ 2019 ರಲ್ಲಿ ಸಿಫಿಲಿಸ್‌ಗೆ ಚಿಕಿತ್ಸೆ ಪಡೆದಿದ್ದ. ಬೈಪೋಲಾರ್ ಡಿಸಾರ್ಡರ್‌ನಿಂದ ಬಳಲುತ್ತಿದ್ದ. 2021 ರಲ್ಲಿ COVID-19 ಲಸಿಕೆಯ ಎರಡು ಡೋಸ್ ಪಡೆದಿದ್ದ. ಆತನಿಗೆ 2022ರ ಜನವರಿಯಲ್ಲಿ ಕೊರೊನಾ ಸೋಂಕು ತಗುಲಿತ್ತು. ಆಸ್ಪತ್ರೆಗೆ ದಾಖಲಾದ ನಂತರ ವೈರಲ್ ಹೆಪಟೈಟಿಸ್, ಹರ್ಪಿಸ್ ಸಿಂಪ್ಲೆಕ್ಸ್, ಗೊನೊರಿಯಾ, ಕ್ಲಮೈಡಿಯ ಮತ್ತು ಲಿಂಫೋಗ್ರಾನುಲೋಮಾ ವೆನೆರಿಯಮ್ (ಎಲ್‌ಜಿವಿ) ಗಾಗಿ ನಡೆಸಲಾದ ಸೆರಾಲಜಿ ಪರೀಕ್ಷೆಗಳು ನೆಗೆಟಿವ್ ಬಂದಿವೆ. HIV ಪರೀಕ್ಷೆ ಮಾತ್ರ ಪಾಸಿಟಿವ್ ಬಂದಿದೆ. ಒಮ್ಮೆಲೇ ಮೂರು ಸೋಂಕುಗಳೂ ತಗುಲಿರುವುದರಿಂದ ರೋಗಿಯನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದೆ.