ಒಂದೊಂದು ದೇಶ, ಜಾತಿ, ಜನಾಂಗದಲ್ಲಿ ಒಂದೊಂದು ಸಂಸ್ಕೃತಿ, ಭಿನ್ನ ಪದ್ಧತಿಗಳು ರೂಢಿಯಲ್ಲಿವೆ. ಪ್ರತಿ ದೇಶಗಳ ಸಂಪ್ರದಾಯ, ಆಚರಣೆಗಳು ವಿಭಿನ್ನವಾಗಿರುತ್ತವೆ. ಕೆಲ ಪದ್ಧತಿಗಳು ಚಿತ್ರ-ವಿಚಿತ್ರವಾಗಿರುತ್ತವೆ. ದಕ್ಷಿಣ ಆಫ್ರಿಕಾದ ಬುಡಕಟ್ಟು ಜನಾಂಗವೊಂದು ಪತ್ನಿಯರನ್ನು ಬದಲಿಸುವ ಹಬ್ಬ ಆಚರಿಸುತ್ತದೆ.
ದಕ್ಷಿಣ ಆಫ್ರಿಕಾದ ಸಹೇಲ್ ಹೆಸರಿನ ಪ್ರದೇಶದಲ್ಲಿ ವಡಾಬಿ ಹೆಸರಿನ ಬುಡಕಟ್ಟು ಜನಾಂಗವೊಂದಿದೆ. ಇದು ಮರುಭೂಮಿಯಾಗಿದ್ದು, ಇಲ್ಲಿ ಮಹಿಳೆಯರ ಬದಲು ಪುರುಷರು ಸೌಂದರ್ಯ ವೃದ್ಧಿಗೆ ಹೆಚ್ಚು ಗಮನ ನೀಡುತ್ತಾರೆ. ಇಲ್ಲಿ ಪುರುಷರು, ಮಹಿಳೆಯರನ್ನು ಆಕರ್ಷಿಸಬೇಕಾಗುತ್ತದೆ. ಗೃಹಿಣಿಯನ್ನು ಪರ ಪುರುಷ ಮನವೊಲಿಸಿಕೊಳ್ಳಬೇಕಾಗುತ್ತದೆ. ಇದನ್ನು ಹಬ್ಬದ ರೀತಿಯಲ್ಲಿ ಬುಡಕಟ್ಟು ಜನಾಂಗದವರು ಆಚರಿಸುತ್ತಾರೆ.
ಈ ಹಬ್ಬಕ್ಕಾಗಿ ಪುರುಷರು ವರ್ಷಪೂರ್ತಿ ಕಷ್ಟಪಡ್ತಾರೆ. ಹಬ್ಬದ ದಿನ ಮೈದಾನದ ಬಳಿ ಹುಡುಗಿಯರು ಹಾಗೂ ಗೃಹಿಣಿಯರು ಬಂದು ಕುಳಿತುಕೊಳ್ತಾರೆ. ಅವರ ಮುಂದೆ ಪುರುಷರು ನೃತ್ಯ ಮಾಡಬೇಕಾಗುತ್ತದೆ. ಅವರ ಮೇಕಪ್ ನಿಂದ ಹಿಡಿದು ನೃತ್ಯ ಮಾಡುವ ಶೈಲಿ ಸೇರಿದಂತೆ ಎಲ್ಲವನ್ನೂ ಅಳೆದು-ತೂಗಿ ಮಹಿಳೆಯರು ಪುರುಷರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆಯ್ಕೆಯಾದ ತಕ್ಷಣ ಆಕೆ ಆತನ ಜೊತೆ ಹೋಗಬಹುದು. ಮದುವೆಯಾದ ಮಹಿಳೆ ಬೇರೆ ಪುರುಷನ ಜೊತೆ ಹೋದ್ರೆ ಪತಿ ಏನೂ ಮಾಡುವಂತಿಲ್ಲ. ಮದುವೆಗೂ ಮುನ್ನ ಮಹಿಳೆಯಾದವಳು ಅನೇಕ ಪುರುಷರ ಜೊತೆ ಸಂಬಂಧ ಬೆಳೆಸಲೂ ಇಲ್ಲಿ ಅವಕಾಶವಿದೆ.