ನವದೆಹಲಿ: ಪ್ಯೂ ಎಂಬ ಸಂಶೋಧನಾ ಕೇಂದ್ರವು ಭಾರತದಲ್ಲಿ ಲಿಂಗ ಪಾತ್ರಗಳ ಬಗ್ಗೆ ಸಮೀಕ್ಷೆ ನಡೆಸಿದೆ. ಈ ವೇಳೆ ಸಮೀಕ್ಷೆಯಲ್ಲಿ ಅಚ್ಚರಿಯ ವಿಚಾರಗಳು ಬಯಲಾಗಿದೆ.
ಮಹಿಳೆಯರು ಪುರುಷರಿಗೆ ಸಮಾನವಾದ ಹಕ್ಕುಗಳನ್ನು ಹೊಂದಲು ಇಷ್ಟಪಡುತ್ತಾರೆ. ಆದರೆ, ಉದ್ಯೋಗ ಮಾತ್ರ ಪುರುಷರೇ ಮಾಡಬೇಕು ಎಂಬ ಮನೋಭಾವನೆಯನ್ನು ಹೊಂದಿದ್ದಾರೆ ಎಂಬುದು ಅಧ್ಯಯನದಲ್ಲಿ ತಿಳಿದುಬಂದಿದೆ.
ಈ ಮುಖಾಮುಖಿ ಅಧ್ಯಯನದಲ್ಲಿ ಮೂವತ್ತು ಸಾವಿರ ವಯಸ್ಕ ಭಾರತೀಯರು ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ. ಮಹಿಳೆಯರಿಗೆ ಪುರುಷರಂತೆ ಸಮಾನ ಹಕ್ಕುಗಳು ಬೇಕು. ಆದರೆ, ಉದ್ಯೋಗದ ವಿಷಯಕ್ಕೆ ಬಂದಾಗ ಪುರುಷರು ಮಾತ್ರ ಹೆಚ್ಚಿನ ಉದ್ಯೋಗ ಮಾಡಬೇಕು ಎಂದು ಶೇ.80 ರಷ್ಟು ಮಹಿಳೆಯರು ಒಪ್ಪಿಕೊಂಡಿದ್ದಾರೆ.
ಆರ್ಥಿಕ ಜವಾಬ್ದಾರಿಗಳ ವಿಷಯದಲ್ಲಿ, ಶೇ. 54ರಷ್ಟು ಭಾರತೀಯರು ಇಬ್ಬರೂ ಕೂಡ ಗಳಿಸಬೇಕು ಎಂದು ಹೇಳಿದ್ರೆ, ಶೇ.43ರಷ್ಟು ಜನರು ಆಹಾರ ಸಂಪಾದಿಸುವುದು ಪುರುಷರ ಮುಖ್ಯ ಜವಾಬ್ದಾರಿ ಎಂದು ಹೇಳಿದ್ದಾರೆ. ಅಲ್ಲದೆ ಪತ್ನಿಯು ತನ್ನ ಪತಿಗೆ ವಿಧೇಯಳಾಗಿರಬೇಕು ಎಂದು 10 ರಲ್ಲಿ ಒಂಭತ್ತು ಮಂದಿ ಒಪ್ಪಿಕೊಂಡಿದ್ದಾರೆ.
ರಾಜಕೀಯವಾಗಿ, ಭಾರತೀಯರಿಗೆ ಮಹಿಳೆಯರನ್ನು ತಮ್ಮ ನಾಯಕರನ್ನಾಗಿ ಸ್ವೀಕರಿಸಲು ಯಾವುದೇ ಸಮಸ್ಯೆ ಇಲ್ಲ. ಐವತ್ತೈದು ಪ್ರತಿಶತ ವಯಸ್ಕರು, ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಮಾನವಾಗಿ ರಾಜಕೀಯ ನಾಯಕತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ ಎಂದು ಹೇಳಿದ್ದಾರೆ.
ಹೆಚ್ಚಿನ ಭಾರತೀಯರು ಎರಡೂ ಲಿಂಗಗಳು ಕುಟುಂಬದ ಜವಾಬ್ದಾರಿಗಳನ್ನು ಹಂಚಿಕೊಳ್ಳಬೇಕೆಂದು ಒಪ್ಪುತ್ತಾರೆ ಎಂದು ಸಮೀಕ್ಷೆಯು ಕಂಡುಹಿಡಿದಿದೆ. ಶೇ.62 ರಷ್ಟು ಪುರುಷರು ಮತ್ತು ಮಹಿಳೆಯರು ಇಬ್ಬರೂ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಂಶೋಧನೆ ಗಮನಿಸಿದೆ. ಆದರೆ ಶೇ.34ರಷ್ಟು ಮಂದಿ ಮಕ್ಕಳ ಆರೈಕೆಯಂತಹ ಜವಾಬ್ದಾರಿಗಳನ್ನು ಪ್ರಾಥಮಿಕವಾಗಿ ಮಹಿಳೆಯರೇ ನಿರ್ವಹಿಸಬೇಕು ಎಂದು ಹೇಳಿದ್ದಾರೆ.
ಬಹುಪಾಲು ಭಾರತೀಯ ವಯಸ್ಕರು, ಕುಟುಂಬಗಳು ಗಂಡು ಮತ್ತು ಹೆಣ್ಣು ಮಕ್ಕಳನ್ನು ಹೊಂದಿರುವುದು ಮುಖ್ಯ ಎಂದು ಹೇಳಿದೆ. ಆದರೂ ಭಾರತದಲ್ಲಿ ಗಂಡು ಮಗುವಿಗೆ ಜಾಸ್ತಿ ಪ್ರಾಶಸ್ತ್ಯ ನೀಡಲಾಗುತ್ತದೆ. ಶೇ.63ರಷ್ಟು ಹಿಂದೂಗಳು ತಮ್ಮ ಹೆತ್ತವರ ಕೊನೆಯ ವಿಧಿ ಅಥವಾ ಅಂತ್ಯಸಂಸ್ಕಾರಕ್ಕೆ ಪುತ್ರರು ಮುಖ್ಯ ಎಂಬುದಾಗಿ ಪ್ರತಿಪಾದಿಸುತ್ತಾರೆ. ಈ ಸಂಖ್ಯೆ ಮುಸ್ಲಿಮರಿಗೆ 74 ಪ್ರತಿಶತ ಮತ್ತು ಜೈನರಿಗೆ 67 ಪ್ರತಿಶತದಷ್ಟಿದೆ.
ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ಬೌದ್ಧರು ಗಂಡು ಮತ್ತು ಹೆಣ್ಣು ಇಬ್ಬರೂ ಜವಾಬ್ದಾರರಾಗಿರಬೇಕು ಎಂದು ಹೇಳಿದ್ದಾರೆ. ಕೆಲವೇ ಕೆಲವರು, ಯಾವುದೇ ಧರ್ಮವನ್ನು ಲೆಕ್ಕಿಸದೆ, ಹೆಣ್ಣುಮಕ್ಕಳು ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನಡೆಸಬೇಕೆಂದು ಹೇಳಿದ್ದಾರೆ.
ಭಾರತೀಯರು ಸಂಪ್ರದಾಯಗಳಿಗೆ ಅಂಟಿಕೊಳ್ಳುತ್ತಾರೆ
ಇತರ ದೇಶಗಳಿಗೆ ಹೋಲಿಸಿದರೆ, ಭಾರತೀಯರು ಹೆಚ್ಚು ಸಂಪ್ರದಾಯವಾದಿಗಳು. ಸಾಂಪ್ರದಾಯಿಕ ಆಚರಣೆಗಳು ಇಷ್ಟಪಡುತ್ತಾರೆ. ಸಮೀಕ್ಷೆಗೆ ಒಳಗಾದ 61 ದೇಶಗಳಲ್ಲಿ ಕೇವಲ ಒಂದು ದೇಶವು ಭಾರತಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದ್ದು, ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚಿನ ಉದ್ಯೋಗದ ಹಕ್ಕು ಇರಬೇಕು ಎಂದು ಪ್ರತಿಪಾದಿಸುತ್ತಾರೆ.