ಮಹಿಳೆಯರಂತೆ ಪುರುಷರೂ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಾರೆ. ಕೂದಲು ಕಡಿಮೆಯಾಗುತ್ತಿದ್ದಂತೆ ಬಕ್ಕ ತಲೆ ಕಾಡುವ ಭೀತಿಯಿಂದ ನರಳುತ್ತಾರೆ. ಈ ಬಗ್ಗೆ ಮೊದಲೇ ಮುನ್ನೆಚ್ಚರಿಕೆ ಮಾಡಿದರೆ ತಲೆ ಬೋಳಾಗುವುದನ್ನು ತಡೆಯಬಹುದು.
ತಲೆ ಬೋಳಾಗುವ ಮೊದಲ ಲಕ್ಷಣವೆಂದರೆ ಹಣೆಯ ಕೂದಲು ಹಿಂದಕ್ಕೆ ಹೋಗುವುದು. ಕಿವಿಯ ಮೇಲ್ಭಾಗದ ಹಣೆಯ ಪಕ್ಕದಲ್ಲಿ ಕೂದಲು ಕಡಿಮಯಾಗುವುದು, ಸ್ನಾನ ಮಾಡುವಾಗ, ತಲೆ ಬಾಚುವಾಗ ವಿಪರೀತ ಕೂದಲು ಉದುರುವುದು ಕಂಡು ಬರುತ್ತದೆ.
ಇದಕ್ಕೆ ಅಪೌಷ್ಟಿಕತೆಯೂ ಕಾರಣವಿರಬಹುದು. ಕೆಲಸದ ಒತ್ತಡದಲ್ಲಿ ಊಟೋಪಚಾರಕ್ಕೆ ಹೆಚ್ಚಿನ ಮಹತ್ವ ನೀಡದಿರುವುದರಿಂದಲೂ ಕೂದಲು ಉದುರಬಹುದು.
ಹೊಟ್ಟು ಅಥವಾ ಇತರ ಕಾರಣಗಳಿಂದ ತಲೆ ವಿಪರೀತ ತುರಿಕೆಯಾಗಿ ತುರಿಸುತ್ತಿದ್ದಂತೆ ಹೆಚ್ಚು ಕೂದಲು ಉದುರಿ ತಲೆ ಬೋಳಾಗುವ ಸಾಧ್ಯತೆಗಳೂ ಇವೆ. ಬುಡದಿಂದಲೇ ಕೂದಲು ಕಿತ್ತು ಬರುವುದರಿಂದ ತಲೆ ತೆಳ್ಳಗಾಗುತ್ತದೆ.
ಅನುವಂಶಿಕವಾಗಿ ಬಕ್ಕತಲೆ ಬಂದಿದ್ದರೆ ಏನು ಮಾಡಲೂ ಸಾಧ್ಯವಾಗದು, ಸಾಧ್ಯವಾದಷ್ಟು ಕೂದಲಿನ ಆರೈಕೆ ಮಾಡುವ ಮೂಲಕ, ಪೌಷ್ಟಿಕ ಆಹಾರ ಸೇವಿಸುವ ಮೂಲಕ, ನೆತ್ತಿಯಲ್ಲಿ ಹೆಚ್ಚು ನೀರಿನಂಶ ಉಳಿಯದಂತೆ ನೋಡಿಕೊಳ್ಳುವುದರ ಮೂಲಕ, ಉತ್ತಮ ದರ್ಜೆಯ ಆರೋಗ್ಯಕರ ಶ್ಯಾಂಪೂ ಬಳಸುವ ಮೂಲಕ ಕೂದಲು ಉದುರುವುದನ್ನು ಕಡಿಮೆ ಮಾಡಿಕೊಳ್ಳಬಹುದು.