ಪುರುಷರಿಗೆ ಕೇಶ ವಿನ್ಯಾಸಕ್ಕೆ ಮಹಿಳೆಯರಷ್ಟು ಆಯ್ಕೆಗಳಿಲ್ಲ ಎಂದುಕೊಳ್ಳಬೇಡಿ. ಹಾಗೆ ನೋಡಲು ಹೋದರೆ ಮಹಿಳೆಯರಿಗಿಂತಲೂ ಹೆಚ್ಚಿನ ಅವಕಾಶ ಪುರುಷರಿಗಿದೆ. ಟ್ರೆಂಡಿಯಾಗಿರುವ ಕೂದಲು ಸೆಟ್ ಮಾಡಿಕೊಳ್ಳುವುದು ಪುರುಷರ ಫ್ಯಾಶನ್ ಗಳಲ್ಲೊಂದು.
ಪ್ರಸ್ತುತ ಜುಟ್ಟು ಬಿಡುವುದು ಇಂಥ ಟ್ರೆಂಡ್ ಗಳಲ್ಲಿ ಒಂದು. ಇದನ್ನು ಬೇರೆ ಬೇರೆ ಆಕಾರದಲ್ಲಿ ಸುತ್ತಿ ರಬ್ಬರ್ ಬ್ಯಾಂಡ್ ಒಂದನ್ನು ಸುತ್ತಿಕೊಂಡರೆ ಅಥವಾ ಕ್ಲಿಪ್ ಸಿಕ್ಕಿಸಿಕೊಂಡರೆ ಮುಗಿಯಿತು. ಮುಖಕ್ಕೆ ಆಕರ್ಷಣೆಯನ್ನೂ ನೀಡುವ ಈ ವಿನ್ಯಾಸ ಲಾಕ್ ಡೌನ್ ಪರಿಣಾಮ ಸಲೂನ್ ಬಂದ್ ಆದ ಬಳಿಕ ಹೆಚ್ಚು ಪ್ರಚಾರ ಪಡೆಯಿತು.
ಕ್ಲಾಸಿಕ್ ಲುಕ್ ಎಂಬ ಇನ್ನೊಂದು ಹೇರ್ ಸ್ಟೈಲ್ ಎಲ್ಲಾ ವಯಸ್ಸಿನವರಿಗೂ ಹೊಂದಿಕೊಳ್ಳುತ್ತದೆ. ಮಕ್ಕಳಿಂದ ಹಿಡಿದು ತಲೆತುಂಬಾ ಕೂದಲಿರುವ ವಯೋವೃದ್ಧರೂ ಇದನ್ನು ಪ್ರಯತ್ನಿಸಬಹುದು.
ಬ್ಲೋಔಟ್ ಲುಕ್ ಎಂಬ ವಿನ್ಯಾಸದಲ್ಲಿ ಕೂದಲನ್ನು ಎರಡೂ ಕಿವಿಯ ಬದಿಗಳಲ್ಲಿ ಸಣ್ಣದಾಗಿ ಕತ್ತರಿಸಿ ಮಧ್ಯಭಾಗದಲ್ಲಿ ಮಾತ್ರ ಉದ್ದಕ್ಕೆ ಬಿಡಲಾಗುತ್ತದೆ. ಇವು ಯುವಕರಿಗೆ ಆಕರ್ಷಕವಾಗಿ ಕಾಣುವ ಹೇರ್ ಸ್ಟೈಲ್ ಆಗಿದೆ. ನೆತ್ತಿಯಲ್ಲಿ ಮಾತ್ರ ನೇರವಾಗಿ ನಿಲ್ಲುವ ಈ ಕೂದಲು ಯುವಕರ ನೆಚ್ಚಿನ ಸ್ಟೈಲ್ ಗಳಲ್ಲೊಂದು.
ಆರ್ಮಿ ಕಟ್ ಬಲಿಷ್ಠ ಸದೃಢ ದೇಹವನ್ನು ಹೊಂದಿರುವವರಿಗೆ ಸೂಕ್ತ. ಸೈಡ್ ಶೇವ್ ಲಾಂಗ್ ಹೇರ್ ಕೂಡಾ ಇಂಥದ್ದೇ ಇನ್ನೊಂದು ಹೊಸ ವಿನ್ಯಾಸ. ಇದರ ಹೊರತಾಗಿ ಸಿನೆಮಾಗಳಲ್ಲಿ ನಾಯಕ ನಟರು ಯಾವ ವಿನ್ಯಾಸವನ್ನು ಅನುಸರಿಸುತ್ತಾರೋ ಅದೇ ಸ್ಟೈಲ್ ಮುಂದಿನ ಮೂರು ತಿಂಗಳ ತನಕ ಮಾರುಕಟ್ಟೆಯಲ್ಲಿ ಜಾರಿಯಲ್ಲಿರುತ್ತದೆ.