ಕೆಲವು ಕೆಟ್ಟ ಅಭ್ಯಾಸಗಳು ನಮಗೆ ಅನೇಕ ಸಂಕಷ್ಟಗಳನ್ನು ತಂದೊಡ್ಡುತ್ತವೆ. ಪುರುಷರಲ್ಲಿ ವೀರ್ಯಾಣು ಕೊರತೆ ಕೂಡ ಅನೇಕರನ್ನು ಕಾಡುವ ಬಹುದೊಡ್ಡ ಸಮಸ್ಯೆ. ಕೆಲವೊಂದು ದುರಭ್ಯಾಸಗಳೇ ಇದಕ್ಕೆ ಕಾರಣವಾಗಬಹುದು. ಅತಿಯಾದ ಒತ್ತಡ ಮತ್ತು ತಪ್ಪಾದ ಜೀವನಶೈಲಿ ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಕೆಲವೊಂದು ದುರಭ್ಯಾಸಗಳನ್ನು ತ್ಯಜಿಸುವುದು ಸೂಕ್ತ.
ಹೆಚ್ಚು ಸಿಗರೇಟ್ ಸೇದುವ ಪುರುಷರಿಗೆ ವೀರ್ಯಾಣು ಕೊರತೆ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಧೂಮಪಾನವನ್ನು ತ್ಯಜಿಸಬೇಕು. ಮದ್ಯಪಾನ, ತಂಬಾಕು ಸೇವನೆ ಕೂಡ ಪುರುಷರಿಗೆ ಹಾನಿಕಾರಕ. ಅತಿಯಾದ ಆಲ್ಕೊಹಾಲ್ ಸೇವನೆಯು ಟೆಸ್ಟೋಸ್ಟೆರಾನ್ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ವೀರ್ಯಾಣು ಸಂಖ್ಯೆ ಕಡಿಮೆಯಾಗುತ್ತದೆ.
ರಾತ್ರಿ ತಡವಾಗಿ ಮಲಗುವುದು ಕೂಡ ಪುರುಷರ ಫಲವತ್ತತೆಗೆ ಮಾರಕವಾಗಿದೆ. ಇದರಿಂದ ಒತ್ತಡ ಮತ್ತು ಬೊಜ್ಜಿನ ಸಮಸ್ಯೆಗಳು ಕಾಡುತ್ತವೆ. ಪರಿಣಾಮ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಬಹುದು. ಅದಕ್ಕಾಗಿಯೇ ತಡರಾತ್ರಿ ಮಲಗುವ ಅಭ್ಯಾಸವನ್ನು ಬದಲಾಯಿಸಿಕೊಳ್ಳಿ.
ವ್ಯಾಯಾಮ ಮಾಡದೇ ಇರುವುದರಿಂದ ಬೊಜ್ಜಿನ ಸಮಸ್ಯೆ ಉಂಟಾಗುತ್ತದೆ. ಸ್ಥೂಲಕಾಯತೆಯಿಂದಾಗಿ ವೀರ್ಯದ ಚಲನಶೀಲತೆ ನಿಧಾನಗೊಳ್ಳುತ್ತದೆ. ಇದನ್ನು ತಡೆಯಲು ಪುರುಷರು ಪ್ರತಿದಿನ ವ್ಯಾಯಾಮ ಮಾಡಬೇಕು. ಆಗಾಗ ಒತ್ತಡಕ್ಕೆ ಒಳಗಾಗುತ್ತಿದ್ದರೆ ಹುಷಾರಾಗಿರಿ. ಏಕೆಂದರೆ ಒತ್ತಡದ ಸಮಸ್ಯೆಯಿಂದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಬಹುದು. ಆದ್ದರಿಂದ ಯಾವಾಗಲೂ ಸಂತೋಷವಾಗಿರಲು ಪ್ರಯತ್ನಿಸಿ ಮತ್ತು ಒತ್ತಡದಿಂದ ದೂರವಿರಿ.