ಜಗತ್ತಿನಲ್ಲಿ ಕ್ಯಾನ್ಸರ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಕ್ಯಾನ್ಸರ್ ಪತ್ತೆಗೆ ಅತ್ಯಾಧುನಿಕ ರೀತಿಯ ಪರೀಕ್ಷೆಗಳು ಈಗ ಲಭ್ಯವಿವೆ. ಹಾಗಾಗಿ ಜನರು ಈ ಅಪಾಯಕಾರಿ ಕಾಯಿಲೆಯ ಬಗ್ಗೆ ಸಮಯಕ್ಕೆ ಸರಿಯಾಗಿ ತಿಳಿದುಕೊಳ್ಳಬಹುದು. ಚಿಕಿತ್ಸೆಯನ್ನೂ ಪಡೆಯಬಹುದು. ಕ್ಯಾನ್ಸರ್‌ನಲ್ಲಿ ಹಲವು ವಿಧಗಳಿವೆ, ಅವುಗಳಲ್ಲಿ ಒಂದು ವೃಷಣ ಕ್ಯಾನ್ಸರ್. ಇತರ ಕ್ಯಾನ್ಸರ್‌ಗಳಂತೆ ಇದರಲ್ಲೂ ಹಲವು ಆರಂಭಿಕ ಲಕ್ಷಣಗಳಿವೆ. ಈ ಚಿಹ್ನೆಗಳನ್ನು ಪತ್ತೆ ಮಾಡಿದ್ರೆ ರೋಗವನ್ನು ತಪ್ಪಿಸಬಹುದು.
ಪುರುಷರ ವೃಷಣಗಳಲ್ಲಿ ಈ ಕ್ಯಾನ್ಸರ್ ಪ್ರಾರಂಭವಾಗುತ್ತದೆ. ಈ ಕ್ಯಾನ್ಸರ್ ಯಾವುದೇ ವಯಸ್ಸಿನ ಪುರುಷರಿಗೆ ಸಂಭವಿಸಬಹುದು. 15 ರಿಂದ 45 ವರ್ಷ ವಯಸ್ಸಿನ ಪುರುಷರಲ್ಲಿ ಹೆಚ್ಚಿನ ಅಪಾಯವಿದೆ. ವೃಷಣದಲ್ಲಿ ಯಾವುದೇ ರೀತಿಯ ಊತ ಅಥವಾ ಗಡ್ಡೆ ಪತ್ತೆಯಾದರೆ ಅದು ಕ್ಯಾನ್ಸರ್‌ನ ಮೊದಲ ಚಿಹ್ನೆ ಎಂದು ಮೂತ್ರಶಾಸ್ತ್ರಜ್ಞರು ಹೇಳುತ್ತಾರೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಕ್ಯಾನ್ಸರ್ ಕೋಶಗಳು ದೇಹದ ಇತರ ಭಾಗಗಳಿಗೆ ವೇಗವಾಗಿ ಹರಡಲು ಪ್ರಾರಂಭಿಸುತ್ತವೆ. ನಂತರ ಈ ರೋಗವನ್ನು ನಿಯಂತ್ರಿಸುವುದು ತುಂಬಾ ಕಷ್ಟವಾಗುತ್ತದೆ. ವೃಷಣ ಕ್ಯಾನ್ಸರ್‌ನ ಇತರ ರೋಗಲಕ್ಷಣಗಳೆಂದರೆ ಬೆನ್ನು ನೋವು, ಕೆಳ ಹೊಟ್ಟೆ ನೋವು, ಸ್ತನ ಅಂಗಾಂಶದ , ಒಂದು ಅಥವಾ ಎರಡೂ ವೃಷಣಗಳಲ್ಲಿ ಊತ ಅಥವಾ ಗಡ್ಡೆ.
ವೃಷಣ ಕ್ಯಾನ್ಸರ್‌ಗೆ ಕಾರಣಗಳು
ಇದಕ್ಕೆ ನಿಖರವಾದ ಕಾರಣ ಇನ್ನೂ ಪತ್ತೆಯಾಗಿಲ್ಲ. ಕುಟುಂಬದಲ್ಲಿ ಯಾರಾದರೂ ಈ ರೋಗವನ್ನು ಹೊಂದಿದ್ದರೆ, ಮುಂದಿನ ಪೀಳಿಗೆಯಲ್ಲಿ ಅದರ ಅಪಾಯವು ಹೆಚ್ಚಾಗುತ್ತದೆ. ಮಗುವಿನ ಜನನದಿಂದಲೇ ಮುನ್ನೆಚ್ಚರಿಕೆ ವಹಿಸುವುದು ಮತ್ತು ದೇಹದ ಅಂಗಗಳ ಬೆಳವಣಿಗೆಗೆ ಸರಿಯಾದ ಗಮನ ನೀಡುವುದು ಅವಶ್ಯಕ. ಆರೋಗ್ಯ ತಜ್ಞರ ಪ್ರಕಾರ, ಸ್ನಾನ ಮಾಡುವಾಗ ಒಂದು ಸಣ್ಣ ಪರೀಕ್ಷೆಯನ್ನು ಮಾಡುವುದರಿಂದ ಈ ರೋಗದ ಬಗ್ಗೆ ತಿಳಿಯಬಹುದು.
ಇದಕ್ಕಾಗಿ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಸ್ನಾನವನ್ನು ಪ್ರಾರಂಭಿಸಿ. ವೃಷಣವನ್ನು ನಿಧಾನವಾಗಿ ತಿರುಗಿಸುವ ಮೂಲಕ ಯಾವುದೇ ರೀತಿಯ ಊತ, ಉಂಡೆ ಅಥವಾ ಅಸಹಜತೆಯನ್ನು ಗುರುತಿಸಲು ಪ್ರಯತ್ನಿಸಿ. ಕ್ಯಾನ್ಸರ್ ಗಡ್ಡೆಗಳು ಆರಂಭದಲ್ಲಿ ಸಾಮಾನ್ಯವಾಗಿ ನೋವನ್ನು ಉಂಟುಮಾಡುವುದಿಲ್ಲ. ಆದ್ದರಿಂದ ನೋವು ಇಲ್ಲವೆಂದು ನಿರ್ಲಕ್ಷಿಸಬೇಡಿ.