ಕಲಿಯುಗದಲ್ಲಿ ಲೋಕ ಕಲ್ಯಾಣಕ್ಕಾಗಿ ಭೂಮಿಗಿಳಿದು ಬಂದು ದೇವಾನುದೇವತೆಗಳು ನೆಲೆಸಿರುವ ಸ್ಥಳಗಳಿಗೆ ತಮ್ಮದೇ ಆದ ಸ್ಥಳ ಪುರಾಣವಿರುತ್ತದೆ. ಆದಿ ಕಾಲದಲ್ಲಿ ಶಿವನ ಪರಮಭಕ್ತನಾದ ಖರಾಸುರನು ತನ್ನ ತ್ರಿಕಾಲ ಪೂಜೆಗಾಗಿ ಸಮಯಕ್ಕೆ ಅನುಗುಣವಾಗಿ ಶಿವಲಿಂಗವನ್ನು ಸ್ಥಾಪಿಸಿ, ಪೂಜೆಗೈದು ಮುಂದೆ ಸಾಗುತ್ತಿದ್ದ.
ಮಧ್ಯಾಹ್ನ ತನ್ನ ಶಿವಪೂಜೆಗಾಗಿ ಶಂಭುಲಿಂಗನನ್ನು ಸ್ಥಾಪಿಸಿ ಪೂಜೆಗೈದ. ಅದೇ ಹೊನ್ನಾವರ ತಾಲೂಕಿನ ಕಡತೋಕಾದಲ್ಲಿ ನೆಲೆನಿಂತ ಶ್ರೀಸ್ವಯಂಭೂ ದೇವ. ಸಮೀಪದಲ್ಲಿ ನವಿಲಗೋಣದಲ್ಲಿರುವ ನಂದಕೇಶ್ವರ ಬೆಳಗಿನ ಪೂಜೆಗಾಗಿಯೂ, ಖರಾಸುರನಿಂದ ಸ್ಥಾಪನೆಗೊಂಡವುಗಳಾಗಿವೆ.
ದೇವಾಲಯ ಪುರಾತನವಾಗಿದ್ದು ಕೆಂಪುಕಲ್ಲು, ಮಣ್ಣಿನಗೋಡೆ, ಹಂಚು, ತಾಮ್ರದ ಹೊದಿಕೆಗಳಿಂದ ಕೂಡಿದೆ. ದಕ್ಷಿಣ ಭಾರತದ ಚೋಳ ಮಾದರಿಯ ವೇಸರ ಶೈಲಿಯಲ್ಲಿದೆ. ಗುಡ್ಡದ ಉತ್ತುಂಗದಲ್ಲಿ ವನಸಿರಿಯ ನಡುವೆ ಕಂಗೊಳಿಸುತ್ತಿದೆ. ನೂರಾರು ಮೆಟ್ಟಿಲುಗಳ ಕೆಳಗಡೆ ಪವಿತ್ರ ಜಲಾಶಯವಿದೆ. ಕ್ಷೇತ್ರಪಾಲ (ಜಟಗ)ಶಕ್ತಿದೇವತೆ. ಹಸಿರು ಪೈರಿನ ರಕ್ಷಣೆಗೆ, ರೋಗರುಜಿನಗಳ ಪರಿಹಾರಕ್ಕಾಗಿ ಪೂಜೆಗೊಳ್ಳುವ ಶ್ರೀ ಸ್ವಯಂಭೂದೇವ ಅಪಾರಮಹಿಮ ಹಾಗೂ ಭಕ್ತಾಭೀಷ್ಟ ಫಲಪ್ರದ.