
ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಮೈಹಾರ್ ತೆಹಸಿಲ್‌ನಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಇತ್ತೀಚೆಗೆ ನಡೆದ ಪುರಸಭೆ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬ ಕೌನ್ಸಿಲರ್ ಹುದ್ದೆಯಲ್ಲಿ ವಿಜಶಾಲಿಯಾಗಿದ್ದ. ಈ ಗೆಲುವಿನ ಖುಷಿಯಲ್ಲಿ ಸಂಭ್ರಮಿಸಬೇಕಿದ್ದ ಮನೆಯಲ್ಲಿ ಮಾತ್ರ ಸೂತಕದ ಛಾಯೆ ಆವರಿಸಿದೆ.
ರಾಮು ಕೋಲ್, ಮೈಹಾರ್ ಪುರಸಭೆಯ ವಾರ್ಡ್ ಸಂಖ್ಯೆ 3 ರಿಂದ ಕಾಂಗ್ರೆಸ್‌ನ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದಾನೆ. ಮತ ಎಣಿಕೆ ಸಂದರ್ಭದಲ್ಲಿ ರಾಮು ಪುತ್ರ ಕೃಷ್ಣ ಕೋಲ್ ಮನೆಯಲ್ಲೇ ಇದ್ದ. ತಂದೆಯ ಗೆಲುವಿನ ಸುದ್ದಿ ಫೋನ್ ಮೂಲಕ ತಿಳಿಯುತ್ತಿದ್ದಂತೆ ಮನೆಯಲ್ಲಿ ವಿಜಯೋತ್ಸವದ ಸಂಭ್ರಮ ಶುರುವಾಗಿತ್ತು. ಅಭಿಮಾನಿಗಳು ಡೋಲು ಬಾರಿಸುತ್ತಿದ್ದರು, ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದ್ರು.
ಸ್ವೀಟ್ಸ್ ತರಲು ಸೂಚಿಸಿದ ಕೃಷ್ಣ, ಬ್ಯಾಂಡ್‌ನವರನ್ನೂ ಕರೆಸಿದ್ದಾನೆ. ತಾನು ಕೂಡ ಬಟ್ಟೆ ಬದಲಾಯಿಸಿಕೊಳ್ಳಲು ತೆರಳಿದ್ದಾನೆ. ಆದ್ರೆ ಇದ್ದಕ್ಕಿದ್ದಂತೆ ಕೃಷ್ಣ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ ಯಾವುದೇ ಪ್ರಯೋಜನವಾಗಲಿಲ್ಲ. ಅಪ್ಪನ ಗೆಲುವಿನ ಖುಷಿಯಲ್ಲಿದ್ದ ಕೃಷ್ಣ ಹೃದಯಾಘಾತದಿಂದ ಮೃತಪಟ್ಟಿದ್ದ. ವಿಜಯೋತ್ಸವ ಆಚರಿಸಬೇಕಿದ್ದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ. ಆತನ ಹೆತ್ತವರು, ಪತ್ನಿ ಮತ್ತು ಮಕ್ಕಳ ದುಃಖದ ಕಡಲಲ್ಲಿ ಮುಳುಗಿದ್ದಾರೆ.