ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಮರಣ ಇಡೀ ಕನ್ನಡ ಚಿತ್ರರಂಗ ಮಾತ್ರವಲ್ಲ ಕೋಟ್ಯಂತರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಅಸಾಧ್ಯವಾದ ನೋವನ್ನುಂಟುಮಾಡಿದೆ. ಪುನೀತ್ ಸಾಧನೆಗೆ ಗೌರವಾರ್ಥವಾಗಿ ರಾಜ್ಯ ಸರ್ಕಾರದಿಂದ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಲಾಗಿದೆ.
ಪುನೀತ್ ನೆನಪಿನಾರ್ಥವಾಗಿ ಕನ್ನಡ ಚಿತ್ರರಂಗದಿಂದ ಅರಮನೆ ಮೈದಾನದಲ್ಲಿ ಪುನೀತ ನಮನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ’ಕರ್ನಾಟಕ ರತ್ನ’ ಪ್ರಶಸ್ತಿ ನೀಡುವುದಾಗಿ ಘೋಷಿಸಿದರು.
ಡಾ.ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಶಾಕ್ ಆಗಿದ್ದ ಕನ್ನಡ ನಾಡಿನ ಜನತೆ ಪುನೀತ್ ರಾಜ್ ಕುಮಾರ್ ಅವರಲ್ಲಿ ರಾಜ್ ಕುಮಾರ್ ಅವರನ್ನು ಕಾಣುತ್ತಿದ್ದೆವು. ಇದೀಗ ಹಠಾತ್ ಆಗಿ ಪುನೀತ್ ಅವರನ್ನು ಕಳೆದುಕೊಂಡಿರುವುದು ಆಘಾತವನ್ನುಂಟುಮಾಡಿದೆ. ಡಾ.ರಾಜ್ ಕುಮಾರ್ ಸ್ಮಾರಕದಂತೆಯೇ ಪುನೀತ್ ರಾಜ್ ಕುಮಾರ್ ಅವರ ಸ್ಮಾರಕ ನಿರ್ಮಾಣ ಮಾಡುವುದಾಗಿ ತಿಳಿಸಿದರು.