ತಮ್ಮ ಕುಟುಂಬದಲ್ಲಿ ಮಗಳನ್ನು ಹೊಂದಿರುವ ಯಾರಾದರೂ ತಮ್ಮನ್ನು ಅದೃಷ್ಟವಂತರು ಎಂದು ಪರಿಗಣಿಸಬೇಕು. ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳು ಕೂಡ ಸಮಾನರು. ಇದೀಗ ಐಎಎಸ್ ಅಧಿಕಾರಿ ಸಂಜಯ್ ಕುಮಾರ್ ಹಂಚಿಕೊಂಡಿರುವ ಈ ವಿಡಿಯೋ ಮಗಳು ಮತ್ತು ಆಕೆಯ ಪೋಷಕರ ನಡುವಿನ ಪ್ರೀತಿಯನ್ನು ತೋರಿಸುತ್ತದೆ.
ಹೌದು, ಇದೀಗ ವೈರಲ್ ಆಗಿರುವ ವಿಡಿಯೋವನ್ನು ಐಎಎಸ್ ಅಧಿಕಾರಿ ಸಂಜಯ್ ಕುಮಾರ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. 2 ನಿಮಿಷಗಳ ವಿಡಿಯೋದಲ್ಲಿ, ವ್ಯಕ್ತಿಯೊಬ್ಬರು ತನ್ನ ಮಗಳ ಪಾದಗಳನ್ನು ದೊಡ್ಡ ತಟ್ಟೆಯಲ್ಲಿಟ್ಟು ನೀರಿನಿಂದ ತೊಳೆಯುತ್ತಿರುವುದನ್ನು ಕಾಣಬಹುದು. ನಂತರ ಅವರು ಆಕೆಯ ಪಾದಗಳನ್ನು ಹಾಲಿನಿಂದ ತೊಳೆದಿದ್ದಾರೆ. ನಂತರ ಹಾಲನ್ನು ಇನ್ನೊಂದು ಪಾತ್ರೆಗೆ ವರ್ಗಾಯಿಸಿ ಕುಡಿಯಲು ಮುಂದಾದ್ರು.ಈ ವೇಳೆ ಕುಡಿಯದಂತೆ ಮಗಳು ತಡೆದಿದ್ದಾಳೆ.
ನಂತರ ತಂದೆ ತನ್ನ ಪುತ್ರಿಯ ಪಾದಗಳನ್ನು ಬಟ್ಟೆಯಿಂದ ಒರೆಸಿದ್ದಾರೆ. ಬಳಿಕ ಕೆಂಪು ಬಣ್ಣ ತುಂಬಿದ ತಟ್ಟೆಯಲ್ಲಿ ಇಟ್ಟು, ಆಕೆಯ ಹೆಜ್ಜೆಗುರುತುಗಳನ್ನು ಬಿಳಿಯ ಬಟ್ಟೆಯಲ್ಲಿ ಅಚ್ಚೊತ್ತುವಂತೆ ಮಾಡಲು ಹೇಳಿದ್ದಾರೆ. ಯುವತಿ ಕೆಂಬಣ್ಣದ ತಟ್ಟೆಯಲ್ಲಿ ತನ್ನ ಕಾಲುಗಳನ್ನು ಇರಿಸಿ ಬಿಳಿ ಬಣ್ಣದ ಬಟ್ಟೆಯಲ್ಲಿ ಪಾದಗಳನ್ನು ಇಟ್ಟಿದ್ದಾರೆ.
ಇದೊಂದು ಭಾವನಾತ್ಮಕ ಕ್ಷಣವಾಗಿದೆ. ಪಾಲಕರು ತಮ್ಮ ಮಗಳ ವಿದಾಯಕ್ಕೆ ಮೊದಲು ಮನೆಯಲ್ಲಿ ಅವರ ಹೆಜ್ಜೆಗುರುತುಗಳನ್ನು ಇಟ್ಟುಕೊಳ್ಳುತ್ತಾರೆ ಎಂದು ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.