2020 ರಲ್ಲಿ ಮೊದಲ ಬಾರಿಗೆ ಕೊರೊನಾ ಲಾಕ್ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ತಾಯಿಯೊಬ್ಬರು ತಮ್ಮ ಮಗನನ್ನು ಮನೆಗೆ ಕರೆತರಲು ಬರೋಬ್ಬರಿ 1400 ಕಿಲೋಮೀಟರ್ ದೂರದವರೆಗೆ ಸ್ಕೂಟಿಯನ್ನು ತೆಗೆದುಕೊಂಡು ಹೋಗಿದ್ದರು, ಇದೀಗ ಇದೇ ತಾಯಿ ಉಕ್ರೇನ್ನಲ್ಲಿ ಸಿಲುಕಿರುವ ತನ್ನ 19 ವರ್ಷದ ಮಗನ ಬಗ್ಗೆ ಆತಂಕ ಹೊಂದಿದ್ದಾರೆ.
ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿರುವ ರಜಿಯಾ ಬೇಗಂ ತನ್ನ ಪುತ್ರ ನಿಜಾಮುದ್ದೀನ್ ಅಮಾನ್ ಉಕ್ರೇನ್ನಿಂದ ಸುರಕ್ಷಿತವಾಗಿ ಮರಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ನಿಜಾಮುದ್ದೀನ್ ಎಂಬಿಬಿಎಸ್ ಶಿಕ್ಷಣಕ್ಕಾಗಿ ಉಕ್ರೇನ್ನಲ್ಲಿದ್ದಾರೆ.
ಸುಮಿಯಲ್ಲಿ ನಿಜಾಮುದ್ದೀನ್ ಇದ್ದಾರೆ ಎನ್ನಲಾಗಿದ್ದು ಇದು ರಷ್ಯಾದ ಗಡಿಗೆ ತುಂಬಾನೇ ಹತ್ತಿರದಲ್ಲಿದೆ. ಅಲ್ಲದೇ ಭಾರತದ ಸಾಕಷ್ಟು ವಿದ್ಯಾರ್ಥಿಗಳು ಇದೇ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ನಿಜಾಮುದ್ದೀನ್ ಪ್ರಸ್ತುತ ಬಂಕರ್ನಲ್ಲಿದ್ದು, ಫೋನ್ ಮೂಲಕ ತಾಯಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ನನ್ನ ಪುತ್ರ ನನಗೆ ಫೋನ್ ಮಾಡಿ ಏನೂ ತಲೆಕೆಡಿಸಿಕೊಳ್ಳದಂತೆ ಹೇಳಿದ್ದಾನೆ. ಆದರೂ ಪ್ರಧಾನಿ ಮೋದಿ, ಸಿಎಂ ಕೆಸಿ ರಾವ್ ಹಾಗೂ ಗೃಹ ಸಚಿವ ಮೊಹಮ್ಮದ್ ಮಹಮೂದ್ ಅಲಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.