ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಇದರ ಮಧ್ಯೆ ಈ ಪರೀಕ್ಷೆಗಾಗಿ ಸ್ಪೆಷಲ್ ಅಬ್ಸರ್ವರ್ ಆಗಿದ್ದ ಅಧಿಕಾರಿಯೊಬ್ಬರು ಪರೀಕ್ಷಾ ಕೇಂದ್ರದಲ್ಲಿ ಸೆಲ್ಫಿ ತೆಗೆದುಕೊಂಡು ಅದನ್ನು ಗ್ರೂಪಿಗೆ ಹಾಕಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೌದು, ಇಂಥದೊಂದು ಘಟನೆ ವಿಜಯಪುರ ಜಿಲ್ಲೆ ಅಲಮೇಲ ತಾಲೂಕಿನ ದೇವಣಗಾಂವದಲ್ಲಿ ನಡೆದಿದ್ದು, ಅಲ್ಲಿನ ಪರೀಕ್ಷಾ ಕೇಂದ್ರಕ್ಕೆ ಸಿಂದಗಿಯ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲಾ ಭೂಸಗೊಂಡ ಸ್ಪೆಷಲ್ ಅಬ್ಸರ್ವರ್ ಆಗಿ ನಿಯೋಜನೆಗೊಂಡಿದ್ದರು.
ಪರೀಕ್ಷೆ ಆರಂಭದ ದಿನ ಪ್ರಥಮ ಭಾಷೆ ಕನ್ನಡ ಪರೀಕ್ಷೆ ನಡೆಯುತ್ತಿದ್ದ ವೇಳೆ ನಿರ್ಮಲಾ ಅವರು ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಸೆಲ್ಫಿ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲ, ಈ ಫೋಟೋವನ್ನು ಸಮಾಜ ಕಲ್ಯಾಣ ಇಲಾಖೆಯ ಗುಂಪಿಗೆ ಶೇರ್ ಮಾಡಿದ್ದರು. ಇದೀಗ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ವಿಷಯ ಬಂದಿದ್ದು, ಪರೀಕ್ಷಾ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ನಿರ್ಮಲಾ ಅವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.