ಕೊರೊನಾ ಎರಡನೇ ಅಲೆ ಆರ್ಭಟದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿದ್ದು ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಪಾಸ್ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಮಾನದಂಡವನ್ನು ನಿಗದಿಪಡಿಸಲಾಗಿದ್ದು, ಪುನರಾವರ್ತಿತ ವಿದ್ಯಾರ್ಥಿಗಳಿಗೂ ಪರೀಕ್ಷೆ ಇಲ್ಲದೆ ಪಾಸ್ ಮಾಡಲಾಗುತ್ತದೆ.
ಆದರೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡಲು ನಿರ್ಧರಿಸಿರುವಂತೆ 10ನೇ ತರಗತಿ ವಿದ್ಯಾರ್ಥಿಗಳಿಗೂ ಪಾಸ್ ಮಾಡಿ ಎಂಬ ಕೂಗು ಕೇಳಿ ಬರುತ್ತಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ತನ್ನ ನಿಲುವಿಗೆ ಅಂಟಿಕೊಂಡಿದೆ.
ಶಿಕ್ಷಕರು, ಉಪನ್ಯಾಸಕರ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಶುಭಸುದ್ದಿ: ನೇಮಕಾತಿಗೆ ಸರ್ಕಾರದ ಅನುಮೋದನೆ
ಇದರ ಮಧ್ಯೆ ಬೆಂಗಳೂರಿನ ಜ್ಞಾನಮಂದಿರ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಸಿಂಗ್ರೇಗೌಡ ಎಂಬವರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಸರ್ಕಾರದ ತಾರತಮ್ಯ ನೀತಿಯನ್ನು ಪ್ರಶ್ನಿಸಿದ್ದಾರೆ. ಹಲವು ರಾಜ್ಯಗಳು ಈಗಾಗಲೇ 10ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಿದ್ದು, ಆದರೆ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳು ಪರೀಕ್ಷೆ ನಡೆಸಲು ಮುಂದಾಗುವ ಮೂಲಕ ಮಕ್ಕಳ ಪ್ರಾಣವನ್ನು ಅಪಾಯಕ್ಕೆ ಸಿಲುಕಿಸಿದಂತಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.