ಅತ್ಯಂತ ರೋಚಕವಾಗಿದ್ದ ಪಿಫಾ ವಿಶ್ವಕಪ್ ಫೈನಲ್ ಅನ್ನು ಕೋಟ್ಯಾಂತರ ಮಂದಿ ವೀಕ್ಷಿಸಿದ್ದಾರೆ. ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ಮಣಿಸುವ ಮೂಲಕ ವಿಶ್ವಕಪ್ ಅನ್ನು ಗೆದ್ದುಕೊಂಡಿದೆ. ಈ ಹಣಾಹಣಿ ಮೈದಾನದ ಹೊರಗೂ ಸಾಕಷ್ಟು ದಾಖಲೆಗಳನ್ನು ನಿರ್ಮಿಸಿದೆ. ಜಗತ್ತಿನ ಮೂಲೆ ಮೂಲೆಯಲ್ಲಿ ಈ ಪಂದ್ಯದ ಬಗ್ಗೆ ಚರ್ಚೆ ನಡೆದಿದೆ. ಕಳೆದ 25 ವರ್ಷಗಳಲ್ಲಿ ಗೂಗಲ್‌ನಲ್ಲಿ ಕಂಡು ಕೇಳರಿಯದಷ್ಟು ಟ್ರಾಫಿಕ್ ನಿನ್ನೆ ಪಿಫಾ ಫೈನಲ್ ಸಂದರ್ಭದಲ್ಲಿತ್ತು. ಈ ಮಾಹಿತಿಯನ್ನು ಸ್ವತಃ ಗೂಗಲ್ ಸಿಇಓ ಸುಂದರ್ ಪಿಚೈ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಸಹ ಮಾಡಿದ್ದಾರೆ. ಇಡೀ ಜಗತ್ತು ಒಂದೇ ಒಂದು ವಿಷಯವನ್ನು ಸರ್ಚ್ ಮಾಡುತ್ತಿತ್ತು ಅಂತಾ ಪಿಚೈ ಹೇಳಿದ್ದಾರೆ. FIFA ವಿಶ್ವಕಪ್‌ನಲ್ಲಿ ಗೂಗಲ್ ಸರ್ಚ್ ಟ್ರಾಫಿಕ್ 5 ವರ್ಷಗಳಲ್ಲಿ ಅತ್ಯಧಿಕವಾಗಿದೆ ಎಂದಿರೋ ಪಿಚೈ, ಅರ್ಜೆಂಟೀನಾ ಮತ್ತು ಫ್ರಾನ್ಸ್ ತಂಡವನ್ನು ಶ್ಲಾಘಿಸಿದ್ದಾರೆ. ಈ ಪಂದ್ಯವನ್ನು 1 ಶತಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದಾರಂತೆ. ಗೂಗಲ್ ಸರ್ಚ್ ಇಂಜಿನ್ ಅನ್ನು 1998ರಲ್ಲಿ ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ ರಚಿಸಿದರು. 25 ವರ್ಷಗಳಲ್ಲಿ ಶೇ.90ಕ್ಕೂ ಹೆಚ್ಚು ಮಾರುಕಟ್ಟೆಯನ್ನು ಗೂಗಲ್ ವಶಪಡಿಸಿಕೊಂಡಿದೆ. ಗೂಗಲ್‌ನ ಛಾಪು ಸಂಪೂರ್ಣವಾಗಿ ಡಿಜಿಟಲ್ ಮಾರುಕಟ್ಟೆಯ ಮೇಲೆಯೇ ಇದೆ ಎನ್ನಬಹುದು.
ಗೂಗಲ್ ರಿಯಲ್ ಟೈಮ್‌ನಲ್ಲಿ ಉತ್ತಮ ಅಪ್ಡೇಟ್ ನೀಡಿದೆ ಅಂತಾ ಬಳಕೆದಾರರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಪಂಚದ ಹೆಚ್ಚಿನ ಜನರು ತಮ್ಮ ಪ್ರತಿಯೊಂದು ಕೆಲಸಕ್ಕೂ ಗೂಗಲ್ ಅನ್ನು ನೆಚ್ಚಿಕೊಂಡಿದ್ದಾರೆ. ಅಡುಗೆಯಿಂದ ಹಿಡಿದು ಅಧ್ಯಯನದವರೆಗೆ ಗೂಗಲ್ ಅನ್ನು ಬಳಸುತ್ತಿದ್ದಾರೆ. ಗೂಗಲ್ ಪ್ರತಿ ವರ್ಷ ಅತಿ ಹೆಚ್ಚು ಸರ್ಚ್ ಮಾಡಲಾದ ಸೆಲೆಬ್ರಿಟಿಗಳು, ಸಿನೆಮಾ ಮತ್ತು ಇತರ ವಿಷಯಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಆದರೆ ಗೂಗಲ್‌ನಲ್ಲಿ ಈ ಪರಿ ದಟ್ಟಣೆ ಉಂಟಾಗಿರುವುದು ಇದೇ ಮೊದಲು.