ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕಿ ದಿವ್ಯ ಹಾಗರಗಿ ಅವರ ಜ್ಞಾನ ಜ್ಯೋತಿ ಶಾಲೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಕ್ರಮ ನಡೆದಿರುವ
ಕಲಬುರ್ಗಿಯ ಗೋಕುಲ ನಗರದಲ್ಲಿರುವ ಬಿಜೆಪಿ ನಾಯಕಿ ಒಡೆತನದ ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರಕ್ಕೆ ಸಿಐಡಿ ಅಧಿಕಾರಿಗಳು ಭೇಟಿ ನೀಡಿ ಮೂರುಜನ ಪರೀಕ್ಷಾ ಮೇಲ್ವಿಚಾರಕರನ್ನು ಬಂಧಿಸಿದ್ದಾರೆ.
ಕೆಲ ಅಭ್ಯರ್ಥಿಗಳ ದೂರನ್ನು ಆಧರಿಸಿ ಈ ದಾಳಿ ನಡೆಸಲಾಗಿದೆ. ದಾಖಲೆಗಳ ಪರಿಶೀಲನೆಗೆ ಸಿಐಡಿ ಅಧಿಕಾರಿಗಳು ದಿವ್ಯ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಮನೆಯಲ್ಲಿದ್ದ ದಿವ್ಯ ಪತಿ ರಾಜೇಶ್ ಹಾಗರಗಿ ಸಿಐಡಿ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡದ ಕಾರಣ ಅವರನ್ನು ವಶಕ್ಕೆ ಪಡೆಯಲಾಗಿದೆ. ದಿವ್ಯ ಅವರ ಫೋನ್ ಕಳೆದ ನಾಲ್ಕು ದಿನಗಳಿಂದ ಸ್ವಿಚ್ಆಫ್ ಆಗಿದ್ದು ಮನೆಯಿಂದ ತಪ್ಪಿಸಿಕೊಂಡಿದ್ದಾರೆ.
ದಿವ್ಯ ಹಾಗರಗಿ ಅವರನ್ನು ಪತ್ತೆ ಮಾಡಿ ಬಂಧಿಸಲು ಸಿಐಡಿ ಪೊಲೀಸರು ಬಲೆ ಬೀಸಿದ್ದಾರೆ. ಅವರ ಬೆಂಗಳೂರಿನ ನಿವಾಸದಲ್ಲೂ ಶೋಧ ಕಾರ್ಯ ನಡೆಸಲಾಗಿದ್ದು ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.