ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಐಡಿ ಸ್ಪೋಟಕ ಮಾಹಿತಿಯನ್ನು ಹೊರಹಾಕಿದೆ. ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿರುವ ಅನುಮಾನವಿರುವುದಾಗಿ ಸಿಐಡಿ ತಿಳಿಸಿದೆ. ಇದರಿಂದ ಪ್ರಕರಣಕ್ಕೆ ಮಹತ್ವದ ತಿರುವು ದೊರಕಿದಂತಾಗಿದೆ.
ಪರೀಕ್ಷಾ ಕೇಂದ್ರದ ಒಳಗೆ ಎಲೆಕ್ಟ್ರಾನಿಕ್ ಉಪಕರಣವನ್ನು ಬಳಸಿರುವ ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕಲ್ಬುರ್ಗಿ ನಿವಾಸಿಯಾದ ವಿಶಾಲ್ ಶಿರೂರ್ ಎಂಬ ಅಭ್ಯರ್ಥಿಯನ್ನು ಸಿಐಡಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಪೊಲೀಸ್ ನೇಮಕಾತಿ ಪ್ರವೇಶ ಪತ್ರ ಹಾಗೂ ಒಎಂಆರ್ ದಾಖಲೆಗಳನ್ನು ಪರಿಶೀಲಿಸಲಾಗಿದ್ದು ಅಕ್ರಮ ಎಸಗಿರುವ ಅಭ್ಯರ್ಥಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದೀಗ ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಉಪಕರಣವನ್ನು ಬಳಸಿರುವ ಅನುಮಾನವಿದ್ದು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಲಾಗಿದೆ.
ಶಾಸಕ ಎಂ ವೈ ಪಾಟೀಲ್ ಅವರ ಗನ್ ಮ್ಯಾನ್ ಹಯ್ಯಾಳಿ ದೇಸಾಯಿ ಅವರನ್ನು ಬಂಧಿಸಲಾಗಿದೆ. ಅವರಿಗೆ ಅಕ್ರಮ ಎಸಗಲು ಸಹಾಯ ಮಾಡಿದ ಆರೋಪದ ಮೇಲೆ ಶರಣಬಸಪ್ಪ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.
ಇದುವರೆಗೂ ಪ್ರಕರಣದಲ್ಲಿ 12 ಜನರನ್ನು ಬಂಧಿಸಲಾಗಿತ್ತು. ಇಂದು ಹಯ್ಯಾಳಿ ದೇಸಾಯಿ ಹಾಗೂ ಸಿಎಆರ್ ಪೊಲೀಸ್ ರುದ್ರೇಗೌಡ ಪಾಟೀಲ್ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.