ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಎಡಿಜಿಪಿಯಾಗಿದ್ದ ಅಮ್ರಿತ್ ಪೌಲ್ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಅವರ ಬಂಧನದ ಬೆನ್ನಲ್ಲೇ ಇದರ ಹಿಂದಿರುವ ಕೆಲ ಪ್ರಭಾವಿಗಳಿಗೂ ಸಂಕಷ್ಟ ಎದುರಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಮ್ರಿತ್ ಪೌಲ್ ಅವರ ಬೆಂಗಳೂರಿನ ಸಹಕಾರ ನಗರದಲ್ಲಿರುವ ಮನೆ, ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಫಾರ್ಮ್ ಹೌಸ್ ಹಾಗೂ ಕಚೇರಿ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ಮಾಡಿದ ವೇಳೆ ಡೈರಿ ಹಾಗೂ ಇತರೆ ದಾಖಲೆಗಳು ಸಿಕ್ಕಿದ್ದು, ಇವುಗಳೇ ಪ್ರಭಾವಿ ವ್ಯಕ್ತಿಗಳಿಗೆ ಸಂಕಷ್ಟ ತಂದೊಡ್ಡಲಿವೆ ಎಂದು ಹೇಳಲಾಗಿದೆ.
ಈ ಪ್ರಭಾವಿಗಳು ತಮಗೆ ಬೇಕಾದವರ ನೇಮಕಾತಿಗೆ ಎಡಿಜಿಪಿಯವರಿಗೆ ಮೌಖಿಕ ಸೂಚನೆ ನೀಡಿದ್ದು, ಅಮ್ರಿತ್ ಪೌಲ್ ಪ್ರಭಾವಿ ವ್ಯಕ್ತಿಯ ಹೆಸರು ಹಾಗೂ ಅವರು ನೇಮಕಾತಿಗೆ ಸೂಚಿಸಿದ ವ್ಯಕ್ತಿಯ ಹೆಸರನ್ನು ತಮ್ಮ ಡೈರಿಯಲ್ಲಿ ಬರೆದಿಟ್ಟಿದ್ದಾರೆನ್ನಲಾಗಿದೆ. ಡೈರಿಯಲ್ಲಿರುವ ಕೈಬರಹ ಹಾಗೂ ಅಮ್ರಿತ್ ಪೌಲ್ ಅವರ ಕೈಬರಹವನ್ನು ಪರಿಶೀಲಿಸಲು ಮುಂದಾಗಿರುವ ಅಧಿಕಾರಿಗಳು ಬಳಿಕ ಮುಂದಿನ ಕ್ರಮಕ್ಕೆ ಸಜ್ಜಾಗಲಿದ್ದಾರೆ.