ಕೋವಿಡ್-19 ನಿಂದ ಸಾವನ್ನಪ್ಪಿದ ಪೋಷಕರ ಮಕ್ಕಳಿಗೆ ನೆರವಾಗುವ ಪಿಎಂ ಕೇರ್ಸ್ ಮಕ್ಕಳ ಯೋಜನೆಯ ಫಲಾನುಭವಿ ಮಕ್ಕಳಿಗೆ ವೈಯಕ್ತಿಕವಾಗಿ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ.
ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ಧೈರ್ಯ ಮತ್ತು ಆತ್ಮಸ್ಥೈರ್ಯವನ್ನು ತುಂಬುವಂತಹ ಪತ್ರಗಳು ಇವಾಗಿದ್ದು, ಇಡೀ ದೇಶ ನಿಮ್ಮೊಂದಿಗೆ ಇದೆ ಎಂದು ಪ್ರಧಾನಿ ಹೇಳಿದ್ದಾರೆ.
ಈ ಯೋಜನೆಯಡಿ ಸೌಲಭ್ಯಗಳನ್ನು ಪಡೆದುಕೊಳ್ಳಲಿರುವ 4,000 ಕ್ಕೂ ಹೆಚ್ಚು ಫಲಾನುಭವಿ ಮಕ್ಕಳಿಗೆ ವೈಯಕ್ತಿಕವಾಗಿ ಬರೆದಿರುವ ಪತ್ರಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದೆ.
ಈ ಸಂಕಷ್ಟದ ಸಂದರ್ಭದಲ್ಲಿ ಇಡೀ ದೇಶವು ನಿಮ್ಮೊಂದಿಗೆ ಇದೆ ಎಂಬ ಭರವಸೆಯನ್ನು ಪತ್ರದ ಮೂಲಕ ತಿಳಿಸಿರುವ ಪ್ರಧಾನಿ, ಪಿಎಂ ಕೇರ್ಸ್ ನಿಧಿಯಿಂದ ನೀಡಲಾಗುವ ಹಣವು ಈ ಮಕ್ಕಳ ಮುಂದಿನ ಜೀವನವನ್ನು ರೂಪಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.
ಹಿಂದಿ, ಇಂಗ್ಲೀಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಬರೆದಿರುವ ಈ ಪತ್ರಗಳು ಸಾಂಕ್ರಾಮಿಕದಿಂದ ಪೋಷಕರನ್ನು ಕಳೆದುಕೊಂಡು ದೈರ್ಯಗೆಟ್ಟಿರುವ ಮಕ್ಕಳಿಗೆ ಆತ್ಮಸ್ಥೈರ್ಯವನ್ನು ತುಂಬಲಿವೆ.