ದಿಢೀರ್ ಸ್ಟ್ರೋಕ್‌ಗಳ ಬಗ್ಗೆ ನೀವು ಕೇಳಿರಬಹುದು. ಅದನ್ನು ಬ್ರೈನ್ ಸ್ಟ್ರೋಕ್ ಅಂತಾನೂ ಕರೆಯಲಾಗುತ್ತದೆ. ಇದು ದೀರ್ಘಾವಧಿಯ ಅಂಗವೈಕಲ್ಯ ಅಥವಾ ಸಾವಿಗೆ ಕಾರಣವಾಗಬಹುದು. ಮೆದುಳಿನ ಒಂದು ಭಾಗಕ್ಕೆ ರಕ್ತ ಪೂರೈಕೆಯನ್ನು ನಿರ್ಬಂಧಿಸಿದಾಗ ಅಥವಾ ಮೆದುಳಿನಲ್ಲಿನ ರಕ್ತನಾಳವು ಒಡೆದಾಗ ಪಾರ್ಶ್ವವಾಯು ಸಂಭವಿಸುತ್ತದೆ. ಸಾಮಾನ್ಯವಾಗಿ ಯಾವುದೇ ಸುಳಿವಿಲ್ಲದೇ ಪಾರ್ಶ್ವವಾಯುವಿಗೆ ರೋಗಿ ತುತ್ತಾಗುತ್ತಾನೆ. ಆದಾಗ್ಯೂ ಕೆಲವೊಂದು ಮುನ್ಸೂಚನೆಗಳು ಮುಂಬರುವ ಅಪಾಯದ ಲಕ್ಷಣಗಳಾಗಿರುತ್ತವೆ. ಸ್ಟ್ರೋಕ್‌ಗೂ ಕೆಲವೇ ಗಂಟೆಗಳ ಮುನ್ನ ಅಥವಾ ಕೆಲವೇ ದಿನಗಳ ಮೊದಲು ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಮಿನಿ ಸ್ಟ್ರೋಕ್ ಎಂದರೇನು?
ಸುಮಾರು 43 ಪ್ರತಿಶತದಷ್ಟು ರೋಗಿಗಳು ಪಾರ್ಶ್ವವಾಯುವಿಗೆ ತುತ್ತಾಗುವ ಒಂದು ವಾರದ ಮೊದಲು ಮಿನಿ ಸ್ಟ್ರೋಕ್ ರೋಗ ಲಕ್ಷಣಗಳನ್ನು ಅನುಭವಿಸುತ್ತಾರೆ. ಮಿನಿ ಸ್ಟ್ರೋಕ್ ಮೆದುಳಿನ ಒಂದು ಭಾಗಕ್ಕೆ ರಕ್ತ ಪೂರೈಕೆಯಲ್ಲಿ ಅಡಚಣೆಯಿಂದಾಗಿ ಸಂಭವಿಸುವ ಅಸ್ಥಿರ ರಕ್ತಕೊರತೆಯನ್ನು (TIA) ಸೂಚಿಸುತ್ತದೆ. ಹಠಾತ್ ಗೊಂದಲ ಕೂಡ ಮಿನಿ ಸ್ಟ್ರೋಕ್ ಸಂಕೇತಗಳಲ್ಲಿ ಒಂದಾಗಿದೆ. ಅಸ್ಥಿರ ರಕ್ತ ಕೊರತೆಯಾದಾಗ ಹಠಾತ್ತನೆ ರೋಗಿಯಲ್ಲಿ ಗೊಂದಲ ಕಾಣಿಸಿಕೊಳ್ಳುತ್ತದೆ. ಸ್ಪಷ್ಟವಾಗಿ ಯೋಚಿಸಲು ಅಥವಾ ಮಾತನಾಡಲು ಸಾಧ್ಯವಾಗುವುದಿಲ್ಲ. 2416 ಜನರನ್ನು ತಜ್ಞರು ಪರೀಕ್ಷಿಸಿದ್ದು, ಈ ಲಕ್ಷಣಗಳು ಕಾಣಿಸಿಕೊಂಡವರು ಒಂದು ವಾರದೊಳಗೆ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ನಿಜವಾದ ಸ್ಟ್ರೋಕ್‌ಗೂ ಮುನ್ನ ಅವರಲ್ಲಿ ಹಠಾತ್ ಗೊಂದಲ ಉಂಟಾಗಿತ್ತು.
ಡೆಲಿರಿಯಮ್ ಅನ್ನು ಗುರುತಿಸುವುದು ಹೇಗೆ?
ಡೆರಿಲಿಯಮ್‌ಗೆ ತುತ್ತಾದಾಗ ರೋಗಿಯು ದಿಗ್ಭ್ರಮೆಯನ್ನು ಅನುಭವಿಸಬಹುದು ಮತ್ತು ಗಮನ ನೀಡಲು ಸಾಧ್ಯವಾಗದೇ ಇರಬಹುದು. ವಿಷಯಗಳನ್ನು ನೆನಪಿಟ್ಟುಕೊಳ್ಳಲು ಕಷ್ಟವಾಗಬಹುದು. ನಿಮ್ಮಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡಬೇಕು.
ಪಾರ್ಶ್ವವಾಯು ತಡೆಯುವುದು ಹೇಗೆ?
ಆರೋಗ್ಯಕರ ಆಹಾರವನ್ನು ಸೇವಿಸುವ ಮೂಲಕ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದು. ಹಣ್ಣು, ತರಕಾರಿ ಮತ್ತು ಧಾನ್ಯಗಳನ್ನು ಸೇವನೆ ಮಾಡಬೇಕು. ಕಡಿಮೆ ಕೊಬ್ಬು, ಹೆಚ್ಚಿನ ಫೈಬರ್ ಇರುವ ಆಹಾರವನ್ನು ಸೇವಿಸಿ. ಉಪ್ಪಿನ ಸೇವನೆಯನ್ನು ಕಡಿಮೆ ಮಾಡಿ. ದಿನಕ್ಕೆ ಆರು ಗ್ರಾಂಗಿಂತ ಹೆಚ್ಚು ಉಪ್ಪನ್ನು ಸೇವಿಸಬೇಡಿ. ಹೆಚ್ಚುವರಿ ಉಪ್ಪು ಸೇವನೆಯು ಅಧಿಕ ರಕ್ತದೊತ್ತಡವನ್ನು ಉಂಟು ಮಾಡಬಹುದು, ಇದು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸಿ.