alex Certify ಪಾರ್ಲೆ- ಜಿ ಪ್ಯಾಕೆಟ್​ನಲ್ಲಿರುವ ‘ಜಿ’ ಎಂಬ ಪದದ ಅರ್ಥವೇನು..? ಪ್ಯಾಕೆಟ್​ನಲ್ಲಿ ಕಾಣುವ ಮಗು ಯಾರು..? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರ್ಲೆ- ಜಿ ಪ್ಯಾಕೆಟ್​ನಲ್ಲಿರುವ ‘ಜಿ’ ಎಂಬ ಪದದ ಅರ್ಥವೇನು..? ಪ್ಯಾಕೆಟ್​ನಲ್ಲಿ ಕಾಣುವ ಮಗು ಯಾರು..? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ಜೀವನದಲ್ಲಿ ಒಮ್ಮೆಯಾದರೂ ನೀವು ಪಾರ್ಲೆ ಜಿ ಬಿಸ್ಕತ್ತನ್ನು ತಿಂದೇ ಇರ್ತೀರಾ..! ಆದರೆ ಈ ಬಿಸ್ಕತ್ತಿಗೆ ಪಾರ್ಲೆ ಜಿ ಎಂಬ ಹೆಸರು ಹೇಗೆ ಬಂತು ಅಂತಾ ಎಂದಾದರೂ ಯೋಚನೆ ಮಾಡಿದ್ದೀರಾ..?‌ ಈ ಬಿಸ್ಕತ್ತು ತಯಾರಿಕೆಯ ಕಾರ್ಯವನ್ನು ಮುಂಬೈನ ವಿಲೇ ಪಾರ್ಲೆಯಲ್ಲಿ ಆರಂಭಿಸಲಾಯ್ತು. ಇದೇ ಕಾರಣಕ್ಕೆ ಪಾರ್ಲೆ ಎಂಬ ಪದವನ್ನು ಬಳಕೆ ಮಾಡಲಾಯ್ತು. ಆದರೆ ಪಾರ್ಲೆ ಜಿ ಯಲ್ಲಿರುವ ‘ಜಿ’ ಅಂದರೆ ಏನು..? ಆ ಪ್ಯಾಕೆಟ್​ನಲ್ಲಿರುವ ಮಗು ಯಾರು..? ಎಂಬ ಪ್ರಶ್ನೆ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ಪಾರ್ಲೆ ಉತ್ಪನ್ನಗಳು 1929ರಿಂದ ಆರಂಭವಾದವು. ಮೊದಲು ಈ ಕಾರ್ಖಾನೆಯಲ್ಲಿ ಕೆಲಸ ಮಾಡ್ತಾ ಇದ್ದದ್ದು ಕೇವಲ 12 ಮಂದಿ ಮಾತ್ರ. ಆಗ ಈ ಬಿಸ್ಕತ್ತಿನ ಹೆಸರು ಪಾರ್ಲೆ – ಗ್ಲುಕೋ ಎಂದಾಗಿತ್ತು. 80 ದಶಕದ ಆರಂಭದವರೆಗೂ ಅದೇ ಹೆಸರನ್ನು ಮುಂದುವರಿಸಲಾಗಿತ್ತು. ಆದರೆ 1981ರಲ್ಲಿ ಕಂಪನಿಯು ಗ್ಲುಕೋ ಎಂಬ ಪದವನ್ನು ಶಾರ್ಟ್ ಮಾಡಿ ಪಾರ್ಲೆ ಜಿ ಎಂದು ಬದಲಾಯಿಸಿದೆ. 80 ದಶಕದಲ್ಲಿ ಈ ಬಿಸ್ಕತ್ತು ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರ ಫೇವರಿಟ್​ ಆಗಿ ಬದಲಾಗಿತ್ತು. ಮಕ್ಕಳಿಗೆ ಈ ಬಿಸ್ಕತ್ತು ಇಷ್ಟವಾದ ಬಳಿಕ ಪಾರ್ಲೆ ಜಿ ಯಲ್ಲಿದ್ದ ಜಿಯನ್ನು ಜೀನಿಯಸ್​ ಎಂದು ಬದಲಾಯಿಸಲಾಯ್ತು. ಆದರೂ ಪ್ಯಾಕೆಟ್​ ಮೇಲೆ ಜಿ ಎಂದೇ ಬರೆಯಲಾಗಿತ್ತು.

ಪಾರ್ಲೆ ಜಿ ಬಿಸ್ಕತ್ತಿನ ಪ್ಯಾಕೆಟ್​ನಲ್ಲಿರುವ ಮಗು ಯಾರು..?

ಪಾರ್ಲೆ ಜಿ ಬಿಸ್ಕತ್ತಿನ ಪ್ಯಾಕೆಟ್​ನಲ್ಲಿರುವ ಮಗು ಯಾರು ಎಂಬದು ಒಂದು ಮಿಲಿಯನ್​ ಡಾಲರ್ ಪ್ರಶ್ನೆಯಾಗಿದೆ. ಹಲವು ದಶಕಗಳೇ ಕಳೆದರೂ ಸಹ ಈ ಮಗು ಯಾರು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ.

ಆದರೆ ಮೂರು ಹೆಸರುಗಳನ್ನು ಸಾಮಾನ್ಯವಾಗಿ ಹೇಳಲಾಗುತ್ತೆ. ನೀರು ದೇಶಪಾಂಡೆ, ಸುಧಾ ಮೂರ್ತಿ ಹಾಗೂ ಗುಂಜನ್​ ಗುಂಡಾನಿಯಾ ಹೆಸರು ಹೆಚ್ಚು ಪ್ರಚಲಿತದಲ್ಲಿದೆ. ಈ ಮೂವರಲ್ಲಿ ಒಬ್ಬರ ಬಾಲ್ಯದ ಪೋಟೋ ಇದು ಎಂದು ಅನೇಕರು ಹೇಳುತ್ತಾರೆ.ಅದರಲ್ಲೂ ನೀರೂ ದೇಶಪಾಂಡೆ ಹೆಸರು ಹೆಚ್ಚಾಗಿ ಕೇಳಲಾಗುತ್ತಿದೆ.

ಹಲವು ಪತ್ರಿಕೆಗಳಲ್ಲಿ ನೀರು ದೇಶಪಾಂಡೆ ಅವರ ಫೋಟೋ ಸಹಿತ ಸುದ್ದಿ ಪ್ರಕಟವಾಗಿತ್ತು. ಈ ಚಿತ್ರವು ನಾಗ್ಪುರದ ನಿವಾಸಿ 65 ವರ್ಷದ ನೀರು ಅವರ ಬಾಲ್ಯದ ಚಿತ್ರ ಎಂದು ಹಲವಾರು ಮಾಧ್ಯಮ ವರದಿಗಳು ಹೇಳಿವೆ. ನೀರೂ ಅವರ ಈ ಚಿತ್ರವನ್ನು ಆಕೆ 4 ವರ್ಷದವಳಿದ್ದಾಗ ತೆಗೆದದ್ದು ಎಂದು ಸುದ್ದಿಯಲ್ಲಿ ಹೇಳಲಾಗಿತ್ತು. ಅವರ ತಂದೆ ವೃತ್ತಿಪರ ಛಾಯಾಗ್ರಾಹಕ ಅಲ್ಲ, ಆದ್ದರಿಂದ ಅವರು ಸುಮ್ಮನೇ ಒಂದು ಫೋಟೋ ತೆಗೆದಿದ್ದರು. ಆ ಫೋಟೊ ಎಷ್ಟು ಚೆನ್ನಾಗಿ ಬಂದಿತ್ತು ಅಂದರೆ ಅದೇ ಫೋಟೋವನ್ನು ಪಾರ್ಲೆ ಜಿ ಪ್ಯಾಕಿಂಗ್​​ಗೆ ಆಯ್ಕೆ ಮಾಡಿಕೊಂಡಿತು ಎಂದು ಹೇಳಲಾಗುತ್ತದೆ.

ಈ ಸುದ್ದಿ ವೈರಲ್​ ಆಗುತ್ತಿದ್ದಂತೆಯೇ ಪಾರ್ಲೆ ಪ್ರಾಡಕ್ಟ್​ನಿಂದ ಸ್ಪಷ್ಟನೆ ನೀಡಲಾಗಿದೆ. ಎಲ್ಲಾ ವದಂತಿಗಳಿಗೆ ಪೂರ್ಣವಿರಾಮ ಹಾಕಿದ ಗ್ರೂಪ್​​ನ ಪ್ರಾಡಕ್ಟ್​ ಮ್ಯಾನೇಜರ್​ ಮಯಂಕ್​ ಷಾ, ಪ್ಯಾಕೆಟ್​ನಲ್ಲಿ ಕಂಡುಬರುವ ಮಗು ಒಂದು ಇಲ್ಯೂಸ್ಟ್ರೇಷನ್​ ಆಗಿದೆ. ಇದನ್ನು 60ರ ದಶಕದಲ್ಲಿ ಮಾಡಲಾಗಿದೆ. ಇಲ್ಲಿ ಯಾವುದೇ ಮಗುವಿನ ಫೋಟೋವನ್ನು ಕಂಪನಿ ಬಳಕೆ ಮಾಡಿಲ್ಲ. ಈ ಚಿತ್ರವನ್ನು ಎವರೆಸ್ಟ್​​ ಕ್ರಿಯೇಟಿವ್​ ಏಜೆನ್ಸಿ ಸಿದ್ದಪಡಿಸಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...