ಕೇಂದ್ರ ಬಜೆಟ್ ಸನಿಹದಲ್ಲಿರುವಾಗಲೇ ದೆಹಲಿಯಲ್ಲಿರುವ ಸಂಸತ್ತನ್ನ ಕೊರೋನಾ ಕಾಡುತ್ತಿದೆ. 400 ಕ್ಕೂ ಹೆಚ್ಚು ಸಂಸತ್ ಸಿಬ್ಬಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.
ಜನವರಿ 4 ರಿಂದ 8 ರವರೆಗೆ 1,409 ಪಾರ್ಲಿಮೆಂಟ್ ಸಿಬ್ಬಂದಿಗಳಲ್ಲಿ 402 ಜನರಿಗೆ ಕೋವಿಡ್ ತಗುಲಿದ್ದು, ಸದ್ಯ ಅವರ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್ ಗಾಗಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಂಸತ್ತಿನ ಸಿಬ್ಬಂದಿಯ ಪ್ರಕಾರ, ಸರ್ಕಾರದ ಮಾರ್ಗಸೂಚಿ ಮುನ್ನೆಚ್ಚರಿಕೆಗಳನ್ನು ಅನುಸರಿಸಲು ಸದಸ್ಯರಿಗೆ ಸೂಚಿಸಲಾಗಿದೆ.
200 ಲೋಕಸಭೆ, 69 ರಾಜ್ಯಸಭೆ, ಇನ್ನುಳಿದ 133 ಸಿಬ್ಬಂದಿಯಲ್ಲಿ ಕೊರೋನಾ ಸೋಂಕು ದೃಢವಾಗಿದೆ. ಸದ್ಯ ಸೋಂಕಿತ ಸಿಬ್ಬಂದಿಗಳೆಲ್ಲರು ಕಡ್ಡಾಯ ನಿಯಮದಂತೆ ಹೋಮ್ ಐಸೋಲೇಷನ್ ಗೆ ಒಳಗಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಂಸತ್ತಿನ ಉಭಯ ಸದನಗಳ ಇತರ ಉದ್ಯೋಗಿಗಳು ಕೆಲಸದ ಸಮಯದಲ್ಲಿ ತಮ್ಮ ಸೋಂಕಿತ ಸಹೋದ್ಯೋಗಿಗಳೊಂದಿಗೆ ಸಂಪರ್ಕಕ್ಕೆ ಬಂದ ನಂತರ ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಯ ವಿವಿಧ ಅಧಿಕಾರಿಗಳು ಕೂಡ ಪ್ರತ್ಯೇಕವಾಗಿದ್ದಾರೆ.
ದೆಹಲಿ ಆಪತ್ತು ನಿರ್ವಹಣಾ ಪ್ರಾಧಿಕಾರ ಇತ್ತೀಚೆಗೆ ಸರ್ಕಾರಿ ಕಚೇರಿಗಳಲ್ಲಿ 50% ಸಿಬ್ಬಂದಿಗಳಷ್ಟೆ ಭೌತಿಕವಾಗಿ ಹಾಜರಿರಬೇಕು, ಇನ್ನುಳಿದವರು ಮನೆಯಿಂದ ಕೆಲಸ ನಿರ್ವಹಿಸಬೇಕು ಎಂದು ಆದೇಶಿಸಿತ್ತು. DDMAಯ ಆದೇಶ ಹಾಗೂ ಒಮಿಕ್ರಾನ್ ರೂಪಾಂತರದ ಗಂಭೀರತೆಯನ್ನ ಅರಿತಿರುವ ಕೇಂದ್ರ ಸರ್ಕಾರ ಎಲ್ಲಾ ನಿಯಮಗಳನ್ನ ಪಾಲಿಸುವುದರೊಂದಿಗೆ, ತನ್ನ ಸಿಬ್ಬಂದಿಗೆ ಹಾಜರಾತಿಗಾಗಿ ಬಯೋಮೆಟ್ರಿಕ್ (ದೈನಂದಿನ ಪಂಚಿಂಗ್) ನಿಂದಲೂ ವಿನಾಯಿತಿ ನೀಡಿದೆ.