ಹೊಸ ವರ್ಷ ಸಮೀಪಿಸುತ್ತಿರೋ ಹಿನ್ನಲೆ ಬೆಂಗಳೂರು ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಇಂದು ನಗರದ ಎಲ್ಲಾ ಪಬ್, ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರ ಜೊತೆ ಸಭೆ ನಡೆಸಿರೋ ಪೊಲೀಸ್ ಇಲಾಖೆ ಹೊಸ ವರ್ಷದ ಡ್ರಗ್ಸ್ ಪಾರ್ಟಿಗಳಿಗೆ ಬ್ರೇಕ್ ಹಾಕಲು ಸಿದ್ಧತೆ ನಡೆಸಿಕೊಂಡಿದೆ.
ಖುದ್ದು ಆಯಾ ವಿಭಾಗದ ಡಿಸಿಪಿಗಳು ಮೀಟಿಂಗ್ ಮಾಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ತಮ್ಮ ತಮ್ಮ ವಿಭಾಗದಲ್ಲಿರುವ ರೆಸ್ಟೊರೆಂಟ್ ಮಾಲೀಕರೊಂದಿಗೆ ಸಭೆ ನಡೆಸಿರೋ ಡಿಸಿಪಿಗಳು, ಯಾರೇ ಡ್ರಗ್ಸ್ ಮಾರಾಟ ಮಾಡುವುದು, ಸೇವಿಸೋದು ಕಂಡ್ರೆ ತಕ್ಷಣ ಮಾಹಿತಿ ಕೊಡುವಂತೆ ಸೂಚನೆ ನೀಡಿದ್ದಾರೆ. ಈ ಹಿಂದೆ ಕೆಲವು ಮಾಲೀಕರೆ ಇಂಥಾ ಕಾನೂನುಬಾಹಿರ ಕೃತ್ಯಗಳಿಗೆ ಸಾಥ್ ನೀಡಿರುವ ಉದಾಹರಣೆಗಳಿರೋದ್ರಿಂದ, ಪಾರ್ಟಿ ಹೆಸರಲ್ಲಿ ಡ್ರಗ್ಸ್ ಸೇವನೆ ಮಾಡಿದ್ರೆ ಕ್ರಿಮಿನಲ್ ಕೇಸ್ ಹಾಕಿ, ಪಬ್, ಬಾರ್ ಅಂಡ್ ರೆಸ್ಟೊರೆಂಟ್ ಲೈಸೆನ್ಸ್ ರದ್ದು ಮಾಡುವ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕಳೆದ ವಾರದಿಂದ ಅಲರ್ಟ್ ಆಗಿರುವ ಪೊಲೀಸರು, ಹೊಸ ವರ್ಷದ ಪಾರ್ಟಿಗಳ ಮೇಲೆ ಕಣ್ಣಿಟ್ಟಿದ್ದ ಪೆಡ್ಲರ್ ಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಪೊಲೀಸರನ್ನು ಯಾಮಾರಿಸೋಕೆ ಡಿಫರೆಂಟ್ ಫ್ಲಾನ್ ಮಾಡಿ, ಹಾಲಿನ ಪೌಡರ್, ರಂಗೋಲಿ ಡಬ್ಬ, ಐಸ್ ಕ್ರೀಂ ಡಬ್ಬದ ಪಾರ್ಸಲ್ ನಲ್ಲಿ ಡ್ರಗ್ಸ್ ತಂದಿದ್ದ ವಿದೇಶಿ ಪೆಡ್ಲರ್ಸ್ ಗಳಿಗೆ ಪೊಲೀಸರು ಶಾಕ್ ನೀಡಿದ್ದಾರೆ.
ಈಗಾಗ್ಲೇ ನಗರದಲ್ಲಿ ಸುಮಾರು 10ಕ್ಕೂ ಹೆಚ್ಚು ವಿದೇಶಿ ಪೆಡ್ಲರ್ಗಳನ್ನ ಅರೆಸ್ಟ್ ಮಾಡಲಾಗಿದೆ. ಡ್ರಗ್ಸ್ ಗೆ ಕಡಿವಾಣ ಹಾಕಲು ಪೊಲೀಸರು ಹಗಲು – ರಾತ್ರಿ ಕಾವಲಾಗಿದ್ರು, ಬೆಂಗಳೂರಿಗೆ ಈಗಾಗ್ಲೇ ಸಾಕಷ್ಟು ಡ್ರಗ್ಸ್ ಎಂಟ್ರಿ ಕೊಟ್ಟಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಮಾಹಿತಿ ಸಿಕ್ಕಿದ್ದೇ ಡಿಸಿಪಿಗಳ ನೇತೃತ್ವದಲ್ಲಿ ವಿಶೇಷ ತಂಡಗಳಿಂದ ನಿಗಾ ವಹಿಸುವಂತೆ ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ. ಇತ್ತ ಪ್ರತಿ ವಿಭಾಗದಲ್ಲಿ ಮೂರು ವಿಶೇಷ ತಂಡಗಳನ್ನು ರಚನೆ ಮಾಡಿರುವ ಡಿಸಿಪಿಗಳು ಹೈ ಅಲರ್ಟ್ ಆಗಿದ್ದಾರೆ.