ಸ್ವಾತಂತ್ರ್ಯ ಅಮೃತ ಮಹೋತ್ಸವದ ನೆನಪಿಗಾಗಿ ಜು. 28 ರಂದು ತೀರ್ಥಹಳ್ಳಿಯಲ್ಲಿ ನಡೆಯುವ ಬೃಹತ್ ಜಾಗೃತಿ ಪಾದಯಾತ್ರೆಯು ಕಾಂಗ್ರೆಸ್ ಪಕ್ಷದ ಚೌಕಟ್ಟಿನಲ್ಲಿಯೇ ನಡೆಯುತ್ತದೆ. ಈ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನ ಎಲ್ಲಾ ಹಿರಿಯ, ಕಿರಿಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಕೆಪಿಸಿಸಿ ಸಹಕಾರಿ ವಿಭಾಗದ ಸಂಚಾಲಕ ಆರ್.ಎಂ. ಮಂಜುನಾಥಗೌಡ ಸ್ಪಷ್ಟಪಡಿಸಿದ್ದಾರೆ.
ಅವರು ಇಂದು ತೀರ್ಥಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಪಾದಯಾತ್ರೆ ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡಿದ ಮಹನೀಯರನ್ನು ನೆನಪಿಸಿಕೊಳ್ಳುವ ಪಾದಯಾತ್ರೆಯಾಗಿದೆ. ಇದರಲ್ಲಿ ಯಾವ ವ್ಯಕ್ತಿ ಪ್ರದರ್ಶನವೂ ಇಲ್ಲ. ಕೆಲವು ಕಾಂಗ್ರೆಸ್ ಮುಂಖಂಡರೇ ಆರೋಪಿಸುವಂತೆ ಇದರಲ್ಲಿ ಯಾವ ಸ್ವಾರ್ಥವೂ ಇಲ್ಲ. ಕಾಂಗ್ರೆಸ್ ನೇತೃತ್ವದಲ್ಲಿಯೇ ಈ ಪಾದಯಾತ್ರೆ ನಡೆಯುತ್ತಿದೆ. ಹಿರಿಯ ರಾಜಕಾರಣಿ, ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪನವರೇ ಈ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಕಿಮ್ಮನೆ ರತ್ನಾಕರ್ ಅವರಿಗೆ ಪಾದಯಾತ್ರೆ ಬಗ್ಗೆ ತಿಳಿಸಿರಲಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲು ತಿಳಿಸಿದ್ದೇ ಕಿಮ್ಮನೆ ರತ್ನಾಕರ್ ಅವರಿಗೆ. ಅವರು ಸೇರಿದಂತೆ ಸುಮಾರು 300 ಕಾಂಗ್ರೆಸ್ ಮುಖಂಡರಿಗೆ ಪತ್ರ ಬರೆದಿದ್ದೇನೆ. ಮೊದಲ ಪತ್ರಿಕಾಗೋಷ್ಠಿಯನ್ನು ಕಾಂಗ್ರೆಸ್ ಕಚೇರಿಯಲ್ಲಿಯೇ ನಡೆಸಿದ್ದೇನೆ ಎಂದರು.
ಕಡಿದಾಳ್ ಮಂಜಪ್ಪನವರ ಸ್ವಾತಂತ್ರ್ಯ ಪ್ರೇಮವನ್ನು ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇಶದ ನಾಯಕರನ್ನು, ಮಹನೀಯರನ್ನು ನೆನಪಿಸಿಕೊಳ್ಳುವುದು. ಇಂದಿನ ಯುವಕರಿಗೆ ಅವರ ಬಗ್ಗೆ ತಿಳಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಈಗ ಬದುಕಿದವರನ್ನು ಬಿಟ್ಟು ಸ್ವಾತಂತ್ರ್ಯಕ್ಕಾಗಿ ಮಡಿದ ಮಹನೀಯರನ್ನು ಫ್ಲೆಕ್ಸ್ ಗಳಲ್ಲಿ ಹಾಕಲಾಗಿದೆ ಅಷ್ಟೇ. ಇದರಲ್ಲಿ ಬೇರೆ ಯಾವ ಉದ್ದೇಶವೂ ಇಲ್ಲ ಎಂದರು.
ಈ ಪಾದಯಾತ್ರೆ ಎಐಸಿಸಿ ಮತ್ತು ಕೆಪಿಸಿಸಿ ಮುಖಂಡ ನಿರ್ದೇಶನದಂತೆಯೇ ನಡೆಯುತ್ತಿದೆ ಹೊರತೂ ಇದು ವೈಯಕ್ತಿಕವಾಗಿ ಅಲ್ಲವೇ ಅಲ್ಲ, ಆದ್ದರಿಂದ ಕಿಮ್ಮನೆ ರತ್ನಾಕರ್ ಅವರು ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವ ಮೂಲಕ ಸಾಮೂಹಿಕ ನಾಯಕತ್ವ ಎಂಬುದನ್ನು ಬಲಪಡಿಸಲಿ ಎಂದರು.