ಚಿಕ್ಕಬಳ್ಳಾಪುರ: ಮೇಕೆದಾಟು ಯೋಜನೆಗಾಗಿ ಆಗ್ರಹಿಸಿ ಕಾಂಗ್ರೆಸ್ ನಾಯಕರು ನಡೆಸಿದ್ದ ಪಾದಯಾತ್ರೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಹತ್ತು ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಪಾದಯಾತ್ರೆಗೆ ಪೊಲೀಸ್ ಭದ್ರತೆ ನಿಟ್ಟಿನಲ್ಲಿ ವಿವಿಧ ಜಿಲ್ಲೆಗಳಿಂದ ತೆರಳಿದ್ದ ಪೊಲೀಸರಲ್ಲಿ ಇದೀಗ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಕರ್ತವ್ಯಕ್ಕೆ ತೆರಳಿದ್ದ 10 ಪೊಲೀಸ್ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಜಿಲ್ಲೆಯಿಂದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಸೇರಿ ಒಟ್ಟು 125 ಪೊಲೀಸರು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಕೋವಿಡ್ ಕಾರಣದಿಂದಾಗಿ ಇದೀಗ ಮೇಕೆದಾಟು ಪಾದಯಾತ್ರೆ 5 ದಿನಕ್ಕೆ ಮೊಟಕುಗೊಂಡಿದ್ದು, ಪಾದಯಾತ್ರೆಯಿಂದ ವಾಪಸ್ ಆದ ಪೊಲೀಸ್ ಸಿಬ್ಬಂದಿಗಳು ಕೋವಿಡ್ ಟೆಸ್ಟ್ ಗೆ ಒಳಪಟ್ಟಿದ್ದಾರೆ. ಈ ವೇಳೆ 10 ಸಿಬ್ಬಂದಿಗಳಲ್ಲಿ ಸೋಂಕು ದೃಢಪಟ್ಟಿದೆ.
ಎಲ್ಲಾ ಸಿಬ್ಬಂದಿಗಳಲ್ಲಿಯೂ ಸೌಮ್ಯ ಲಕ್ಷಣಗಳು ಕಂಡು ಬಂದಿದ್ದು, ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.