
ಫೈನಲ್ ಗೂ ಮುನ್ನ ನಾನು ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದ ವೇಳೆ ನನ್ನ ಜಾವೆಲಿನ್ ಕಾಣಿಸಲಿಲ್ಲ. ಆದರೆ ಅದನ್ನು ಪಾಕಿಸ್ತಾನದ ಅರ್ಷದ್ ನದೀಮ್ ಹಿಡಿದುಕೊಂಡು ತಿರುಗಾಡುತ್ತಿದ್ದರು. ಬಳಿಕ ನಾನು ಅವರ ಬಳಿ ಹೋಗಿ ಇದು ನನ್ನದು ಭಾಯ್ ಎಂದು ಹೇಳಿ ಜಾವೆಲಿನ್ ಪಡೆದುಕೊಂಡಿದ್ದೆ ಎಂದು ನೀರಜ್ ಚೋಪ್ರಾ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕ್ರೀಡಾಪಟು ಅರ್ಷದ್ ನದೀಮ್ ವಿರುದ್ಧ ಬಹಳಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಚಿನ್ನದ ಹುಡುಗ ನೀರಜ್ ಚೋಪ್ರಾ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ವಿಡಿಯೋವನ್ನು ಬಿಡುಗಡೆ ಮಾಡುವ ಮೂಲಕ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಅರ್ಷದ್ ನದೀಮ್ ತಮ್ಮ ಜಾವೆಲಿನ್ ತೆಗೆದುಕೊಂಡಿದ್ದನ್ನು ಸಮರ್ಥಿಸಿಕೊಂಡಿರುವ ನೀರಜ್ ಚೋಪ್ರಾ, ನನ್ನ ಹೇಳಿಕೆಯನ್ನು ನಿಮ್ಮ ಪ್ರಚಾರಕ್ಕಾಗಿ ಬಳಸಿಕೊಳ್ಳಬೇಡಿ ಎಂದು ಅರ್ಷದ್ ನದೀಮ್ ರನ್ನು ಟೀಕಿಸುತ್ತಿರುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾವು ಕ್ರೀಡಾಪಟುಗಳು ಒಗ್ಗಟ್ಟಾಗಿರುವುದನ್ನು ಕ್ರೀಡೆ ನಮಗೆ ಕಲಿಸಿಕೊಡುತ್ತದೆ. ಅಷ್ಟಕ್ಕೂ ಪಾಕಿಸ್ತಾನದ ಕ್ರೀಡಾಪಟು ನನ್ನ ಜಾವೆಲಿನ್ ತೆಗೆದುಕೊಂಡಿದ್ದರಲ್ಲಿ ತಪ್ಪೇನಿದೆ ಎಂದು ನೀರಜ್ ಚೋಪ್ರಾ ಪ್ರಶ್ನಿಸಿದ್ದಾರೆ. ಸ್ಪರ್ಧೆಯಲ್ಲಿ ಎಲ್ಲರ ಜಾವೆಲಿನ್ ಗಳು ಒಂದೇ ಕಡೆ ಇರುತ್ತವೆ. ಅವುಗಳನ್ನು ಯಾರು ಬೇಕಾದರೂ ತೆಗೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.