ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ವೈದ್ಯಕೀಯ ವರದಿಯಲ್ಲಿ ಆಘಾತಕಾರಿ ಸಂಗತಿ ಬಹಿರಂಗವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಇಮ್ರಾನ್ ಖಾನ್ ಮದ್ಯ ಮತ್ತು ಕೊಕೇನ್ ಸೇವನೆ ಮಾಡಿರುವುದು ಬೆಳಕಿಗೆ ಬಂದಿದೆ.
ಇಮ್ರಾನ್ ಖಾನ್ ಬಂಧನದ ಬಳಿಕ ಅವರ ಮೂತ್ರದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪ್ರಾಥಮಿಕ ತನಿಖಾ ವರದಿಯ ಪ್ರಕಾರ ಇಮ್ರಾನ್ ಖಾನ್ ಡ್ರಗ್ಸ್ ದಾಸರಾಗಿದ್ದರು ಅನ್ನೋದು ಬಹಿರಂಗವಾಗಿದೆ. ಅವರು ಮದ್ಯ ಮತ್ತು ಕೊಕೇನ್ ಚಟಕ್ಕೆ ಬಿದ್ದಿದ್ದರು.
ಇದಲ್ಲದೇ, ಪಾಕಿಸ್ತಾನದಲ್ಲಿ ನಡೆಯುತ್ತಿರುವ ವಿವಾದದ ನಡುವೆ ರಾಜಕೀಯದ ಪಿಚ್‌ನಲ್ಲಿ ಇಮ್ರಾನ್ ಖಾನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಲು ಶಹಬಾಜ್ ಷರೀಫ್ ಸರ್ಕಾರ ತಯಾರಿ ನಡೆಸುತ್ತಿದೆ. ಇಮ್ರಾನ್ ಖಾನ್ ಅವರ ಪಕ್ಷದಲ್ಲಿ ಸಹ ಸಂಘರ್ಷ ಶುರುವಾಗಿದೆ. ಒಬ್ಬರಾದ ಮೇಲೊಬ್ಬರಂತೆ ಮುಖಂಡರುಗಳೇ ರಾಜೀನಾಮೆ ನೀಡುತ್ತಿದ್ದು, ಸದ್ಯದಲ್ಲೇ ಇಮ್ರಾನ್ ಪಕ್ಷವನ್ನು ಮುಚ್ಚುವ ಪರಿಸ್ಥಿತಿಯೂ ಬರಬಹುದು. ಇಮ್ರಾನ್ ಖಾನ್ ಅವರ ರಾಜಕೀಯ ಪಕ್ಷದ ಅನೇಕ ಮುಖಂಡರನ್ನು ಪಾಕ್ ಸರ್ಕಾರ ಜೈಲಿಗಟ್ಟುತ್ತಿದೆ.
ಇಮ್ರಾನ್ ಬಂಧನದ ನಂತರ ಹಿಂಸಾಚಾರದ ಆರೋಪದ ಮೇಲೆ ಮಲಿಕಾ ಬುಖಾರಿ ಅವರನ್ನು ಜೈಲಿಗೆ ಕಳುಹಿಸಲಾಯಿತು. ಜೈಲಿನಿಂದ ಹೊರಬಂದ 16 ದಿನಗಳ ನಂತರ ಮಲಿಕಾ ಪಕ್ಷ ತೊರೆದರು. ಇದಾದ ಬಳಿಕ ಫವಾದ್ ಚೌಧರಿ, ಅಸದ್ ಉಮರ್, ಶಿರೀನ್ ಮಜಾರಿ ಸೇರಿದಂತೆ ಅನೇಕರು ಪಿಟಿಐ ಪಕ್ಷವನ್ನು ಧಿಕ್ಕರಿಸಿದ್ದಾರೆ. ಇವರೆಲ್ಲರ ವಿರುದ್ಧವೂ ಸೇನೆ ಪ್ರಕರಣ ದಾಖಲಿಸಿದೆ. ಒಂದೆಡೆ ಇಮ್ರಾನ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರೆ, ಇನ್ನೊಂದೆಡೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಉಮರ್ ಅಟಾ ಬಂಡಿಯಾಲ್, ಸರ್ಕಾರಕ್ಕೆ ಶಾಕ್ ಕೊಟ್ಟಿದ್ದಾರೆ.
ಆಡಿಯೋ ಸೋರಿಕೆ ಪ್ರಕರಣದಲ್ಲಿ ಸರ್ಕಾರ ರಚಿಸಿರುವ ನ್ಯಾಯಾಂಗ ತನಿಖಾ ಆಯೋಗ ಕಾನೂನುಬಾಹಿರ ಎಂದು ಮುಖ್ಯ ನ್ಯಾಯಮೂರ್ತಿ ಬಂಡಿಯಲ್ ಹೇಳಿದ್ದಾರೆ. ಈಗಾಗಲೇ ಸುಪ್ರೀಂ ಕೋರ್ಟ್ ಮತ್ತು ಪಾಕಿಸ್ತಾನ ಸರ್ಕಾರದ ನಡುವೆ ಜಟಾಪಟಿ ನಡೆಯುತ್ತಿದೆ. ಇದೆಲ್ಲದರ ನಡುವೆ ಪಾಕಿಸ್ತಾನದಲ್ಲಿ ಈ ಬಾರಿ ಮುಖ್ಯ ನ್ಯಾಯಮೂರ್ತಿಗಳ ವಿಡಿಯೋ ಲೀಕ್ ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇವ್ಯಾವುದೂ ಇಮ್ರಾನ್ ಖಾನ್‌ಗೆ ಎದುರಾಗಿರುವ ಸಂಕಷ್ಟವನ್ನು ಪರಿಹರಿಸುವುದಿಲ್ಲ.