ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಿದಾಗಿನಿಂದಲೂ ಪಾಕಿಸ್ತಾನ ಹೊತ್ತಿ ಉರಿಯುತ್ತಿದೆ. ಇಮ್ರಾನ್ ಖಾನ್ ಬಂಧನ ವಿರೋಧಿಸಿ ವಿವಿಧೆಡೆ ಪ್ರತಿಭಟನೆಗಳು ಹಿಂಸಾರೂಪ ಪಡೆದಿದೆ. ಪ್ರತಿಭಟನಾಕಾರರು ವಾಹನ, ಕಟ್ಟಡ, ಕಚೇರಿಗಳಿಗೆ ಬೆಂಕಿ ಹಚ್ಚಿದ್ದಾರೆ. ಇಮ್ರಾನ್ ಖಾನ್ ಅವರ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಹಿಂಸಾಚಾರಕ್ಕಿಳಿದಿದ್ದಾರೆ.
ಈ ನಡುವೆ ಪಾಕಿಸ್ತಾನದಿಂದ ಹೊರಬಂದಿರೋ ಮತ್ತೊಂದು ಸುದ್ದಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಪಾಕಿಸ್ತಾನ ಸೇನೆಯೊಳಗೂ ಉಗ್ರ ಬಂಡಾಯದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗುತ್ತಿದೆ. ಪಾಕ್ ಸೇನಾ ಮುಖ್ಯಸ್ಥ ಹಾಗೂ ಪಾಕಿಸ್ತಾನ ಸರ್ಕಾರದ ವಿರುದ್ಧ 6 ಹಿರಿಯ ಸೇನಾ ಅಧಿಕಾರಿಗಳು ತಿರುಗಿ ಬಿದ್ದಿದ್ದಾರೆ. ಪಾಕಿಸ್ತಾನ ಸೇನೆಯ ನಿವೃತ್ತ ಅಧಿಕಾರಿಯೊಬ್ಬರು ಈ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಮತ್ತು ಆಡಳಿತಾರೂಢ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್‌ಮೆಂಟ್ (ಪಿಡಿಎಂ) ವಿರುದ್ಧ ಸೇನೆಯ 6 ಲೆಫ್ಟಿನೆಂಟ್ ಜನರಲ್‌ಗಳು ಬಹಿರಂಗವಾಗಿ ತಿರುಗಿಬಿದ್ದಿದ್ದಾರೆ ಎಂದು ಪಾಕಿಸ್ತಾನದ ನಿವೃತ್ತ ಸೇನಾ ಮೇಜರ್ ಆದಿಲ್ ರಾಜಾ ಟ್ವೀಟ್ ಮಾಡಿದ್ದಾರೆ. ಆದಿಲ್ ರಾಜಾ ಅವರ ಹೇಳಿಕೆಯ ಪ್ರಕಾರ, ಪಾಕಿಸ್ತಾನ ಸೇನೆಯ ಆಸಿಫ್ ಗಫೂರ್, ಅಸಿಮ್ ಮಲಿಕ್, ನೌಮನ್ ಜಕಾರಿಯಾ, ಸಾಕಿಬ್ ಮಲಿಕ್, ಸಲ್ಮಾನ್ ಘನಿ ಮತ್ತು ಸರ್ದಾರ್ ಹಸನ್ ಅಜರ್, ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮತ್ತು ಪಿಡಿಎಂ ಅನ್ನು ಬಹಿರಂಗವಾಗಿ ವಿರೋಧಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಂದಿನ 48 ರಿಂದ 72 ಗಂಟೆ ಪಾಕಿಸ್ತಾನಕ್ಕೆ ಅತ್ಯಂತ ಮಹತ್ವದ್ದು ಎನ್ನಲಾಗ್ತಿದೆ. ಮುಂದಿನ 72 ಗಂಟೆಗಳಲ್ಲಿ ನಿರ್ಧಾರವಾಗಲಿದೆ ಪಾಕಿಸ್ತಾನದ ಭವಿಷ್ಯ! ಮುಂದಿನ 48 ರಿಂದ 72 ಗಂಟೆಗಳು ಪಾಕಿಸ್ತಾನದ ಭವಿಷ್ಯಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ಯಾಕಂದ್ರೆ ಪಾಕಿಸ್ತಾನ ಸೇನೆಯ 6 ಲೆಫ್ಟಿನೆಂಟ್ ಜನರಲ್‌ಗಳು ಅಲ್ಲಿನ ಸೇನಾ ಮುಖ್ಯಸ್ಥ ಮತ್ತು ಪ್ರಧಾನಿ ಶಹಬಾಜ್ ಸರ್ಕಾರದ ವಿರುದ್ಧ ಒಗ್ಗೂಡಿದ್ದಾರೆ. ಅಧ್ಯಕ್ಷರು, ಮುಖ್ಯ ನ್ಯಾಯಮೂರ್ತಿ ಮತ್ತು ಅವರ ನಿರ್ಣಯದ ಪ್ರಸ್ತಾಪಗಳನ್ನು ಬೆಂಬಲಿಸುತ್ತಾರೆ. ಪಾಕಿಸ್ತಾನ ಈಗ ಅಂತರ್ಯುದ್ಧದ ಅಂಚಿನಲ್ಲಿ ನಿಂತಿದೆ.
ವಿವಿಧ ಸ್ಥಳಗಳಲ್ಲಿ ಹಿಂಸಾಚಾರ, ವಿಧ್ವಂಸಕ ಕೃತ್ಯ ಸೇನೆಯ ನಿಯೋಜನೆಯನ್ನು ಹೆಚ್ಚಿಸಲಾಗ್ತಿದೆ. ಸದ್ಯ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಈ ಲೆಫ್ಟಿನೆಂಟ್ ಜನರಲ್‌ಗಳಲ್ಲಿ ಹೆಚ್ಚಿನವರು ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಲು ಪೈಪೋಟಿಯಲ್ಲಿದ್ದರು. ಆದರೆ ಆದರೆ ಅಂತಿಮವಾಗಿ ಅಸೀಮ್ ಮುನೀರ್ ಪ್ರಧಾನಿ ಶಹಬಾಜ್ ಅವರ ಮೊದಲ ಆಯ್ಕೆಯಾದರು. ಇದರಿಂದ ಅಸಮಾಧಾನಗೊಂಡಿರೋ ಸೇನೆಯ ಅಧಿಕಾರಿಗಳು ಬಂಡಾಯದ ಕಹಳ ಮೊಳಗಿಸಿದ್ದಾರೆ. ಇದರಿಂದಾಗಿ ಪಾಕಿಸ್ತಾನದಲ್ಲಿ ಅಂತರ್ಯುದ್ಧದ ಜೊತೆಗೆ ಸೇನೆಗೆ ಹೊಸ ನಾಯಕತ್ವ ಸಿಗಬಹುದು ಎಂಬ ಲೆಕ್ಕಾಚಾರಗಳು ಕೂಡ ಶುರುವಾಗಿವೆ.