alex Certify ಪಾಕಿಸ್ತಾನದಲ್ಲಿ ದ್ವೇಷ ರಾಜಕೀಯದ ದಳ್ಳುರಿ: ಸೇನೆ ಮತ್ತು ಇಮ್ರಾನ್‌ ಖಾನ್‌ ಸ್ನೇಹ ದ್ವೇಷವಾಗಿ ಬದಲಾಗಿದ್ಹೇಗೆ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕಿಸ್ತಾನದಲ್ಲಿ ದ್ವೇಷ ರಾಜಕೀಯದ ದಳ್ಳುರಿ: ಸೇನೆ ಮತ್ತು ಇಮ್ರಾನ್‌ ಖಾನ್‌ ಸ್ನೇಹ ದ್ವೇಷವಾಗಿ ಬದಲಾಗಿದ್ಹೇಗೆ…..?

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ನಂತರ ಇಡೀ ಪಾಕಿಸ್ತಾನದಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇಮ್ರಾನ್‌ ಖಾನ್‌ ಬಂಧನ ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾರೂಪ ಪಡೆದಿತ್ತು. ಸುಪ್ರೀಂ ಕೋರ್ಟ್ನಲ್ಲಿ ಇಮ್ರಾನ್ ಖಾನ್ಗೆ ರಿಲೀಫ್‌ ಸಿಕ್ಕಿದೆ. ಅವರ ಬಂಧನ ಕಾನೂನು ಬಾಹಿರ ಎಂದು ಘೋಷಿಸಿದ ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದೆ. ಒಂದು ಕಾಲದಲ್ಲಿ ಇಮ್ರಾನ್‌ ಖಾನ್‌ ಪಾಕ್‌ ಸೇನೆಯ ಫೇವರಿಟ್‌ ಎನಿಸಿಕೊಂಡಿದ್ದರು. ಆದರೆ ಇಮ್ರಾನ್ ಖಾನ್ ಹಾಗೂ ಪಾಕ್‌ ಸೇನೆಯ ಸಂಬಂಧ ಹಳಸಿದ್ದು ಹೇಗೆ? ಪರಿಸ್ಥಿತಿ ಅವರ ಬಂಧನ ಹಂತಕ್ಕೆ ತಲುಪಿದ್ದು ಹೇಗೆ ಅನ್ನೋದೇ ಇಂಟ್ರೆಸ್ಟಿಂಗ್‌ ವಿಚಾರ.

ಮೇ 7 ರಂದು ನಡೆದ ರ್ಯಾಲಿಯಲ್ಲಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಪಾಕಿಸ್ತಾನ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐಎಸ್‌ಐ ಅಧಿಕಾರಿ ಮೇಜರ್ ಜನರಲ್ ಫೈಸಲ್ ನಾಸೀರ್ ಮಾಡಿರೋ ಕೃತ್ಯ ಇದು ಅಂತಾ ಇಮ್ರಾನ್‌ ಗಂಭೀರ ಆರೋಪ ಮಾಡಿದ್ದರು. ಟಿವಿ ನಿರೂಪಕ ಅರ್ಷದ್ ಷರೀಫ್ ಹತ್ಯೆಯಲ್ಲಿ ನಾಸೀರ್ ಭಾಗಿಯಾಗಿದ್ದಾನೆ ಎಂದಿದ್ದರು. ಇಮ್ರಾನ್ ಖಾನ್ ಅವರ ಈ ಆರೋಪಗಳನ್ನು ಪಾಕಿಸ್ತಾನ ಸೇನೆ ತೀವ್ರವಾಗಿ ಟೀಕಿಸಿತ್ತು. ಇದೇ ಕಾರಣಕ್ಕೆ ಇಮ್ರಾನ್‌ ಖಾನ್‌ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಸೇನೆ, ಅವರನ್ನು ನಾಟಕೀಯವಾಗಿ ಬಂಧಿಸಿತ್ತು.

ಆದರೆ ಸೇನೆ ಮತ್ತು ಖಾನ್ ನಡುವಿನ ಸಂಬಂಧವು ತುಂಬಾ ಹಳೆಯದು. ಪಾಕ್‌ ಪ್ರಧಾನಿಯಾಗಬೇಕೆಂಬ ಖಾನ್ ಕನಸು ನನಸಾಗಿದ್ದು ಸೇನೆಯಿಂದ. ವಾಸ್ತವವಾಗಿ ಪಾಕ್‌ ಸೇನೆ ಈಗ ಹಳೆಯ ರಾಜಕೀಯ ಮುಖಗಳ ನಡುವೆ ಹೊಸ ಮುಖವನ್ನು ಹುಡುಕುತ್ತಿದೆ. ಪ್ರಧಾನಿಯಾಗಿದ್ದಾಗ ಇಮ್ರಾನ್ ಖಾನ್ ತಮ್ಮ ಸರ್ಕಾರ ಮತ್ತು ಸೇನೆಯು ಉತ್ತಮ ಸಂಬಂಧವನ್ನು ಹೊಂದಿದೆ ಎಂದು ಸಾರ್ವಜನಿಕ ವೇದಿಕೆಗಳಲ್ಲಿ ಹಲವಾರು ಬಾರಿ ಪುನರುಚ್ಚರಿಸಿದರು.ಇಮ್ರಾನ್ ಸರ್ಕಾರವು ಸಾರ್ವಜನಿಕರಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಅದರಲ್ಲೂ ಕೊರೊನಾ ಸಮಯದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಅನ್ನೋ ಆರೋಪವಿದೆ.

ಇದೇ ಅಸಮಾಧಾನ ಪಾಕ್‌ ಸೇನೆ ಇಮ್ರಾನ್‌ ವಿರುದ್ಧ ಮುನಿಸಿಕೊಳ್ಳಲು ಮತ್ತೊಂದು ಕಾರಣ. ಆಗಿನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಮತ್ತು ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಹಮೀದ್ ಮುಂದಿನ ಸೇನಾ ಮುಖ್ಯಸ್ಥರಾಗುವ ನಿರೀಕ್ಷೆಯಲ್ಲಿದ್ದರು. ಆದರೆ ಇಮ್ರಾನ್ ಖಾನ್, ಹಮೀದ್ ಅವರನ್ನು ಐಎಸ್‌ಐ ಮಹಾನಿರ್ದೇಶಕರನ್ನಾಗಿ ಮಾಡಲು ಬಯಸಿದ್ದರು. ಆದರೆ ಅದೂ ಸಾಧ್ಯವಾಗಲಿಲ್ಲ. ಲೆಫ್ಟಿನೆಂಟ್ ಜನರಲ್ ಅಂಜುಮ್ ಈ ಹುದ್ದೆಯನ್ನು ಪಡೆದರು.

ಉಕ್ರೇನ್ ಯುದ್ಧದ ಸಮಯದಲ್ಲಿಯೂ ಸೈನ್ಯ ಮತ್ತು ಸರ್ಕಾರದ ನಡುವೆ ಭಿನ್ನಾಭಿಪ್ರಾಯಗಳಿದ್ದವು. ರಷ್ಯಾದ ದಾಳಿಯನ್ನು ಟೀಕಿಸುವುದರಿಂದ ಇಮ್ರಾನ್ ಹಿಂದೆ ಸರಿದರೆ, ಜನರಲ್ ಬಜ್ವಾ ಮಾಸ್ಕೋ ದಾಳಿಯನ್ನು ಟೀಕಿಸಿದರು. ಇಮ್ರಾನ್ ಖಾನ್‌ರನ್ನು ಅಧಿಕಾರದಿಂದ ಕಿತ್ತೊಗೆಯಲು ಇದೆ ಸೂಕ್ತ ಸಮಯವೆಂದು ಸೇನೆ ನಿರ್ಧಿರಿಬಿಟ್ಟಿತ್ತು. 2022ರ ಏಪ್ರಿಲ್‌ನಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಇಮ್ರಾನ್‌ ಸರ್ಕಾರವನ್ನು ಉರುಳಿಸಲಾಯ್ತು.  ಹುದ್ದೆ ಕಳೆದುಕೊಂಡ ಬಳಿಕ ಇಮ್ರಾನ್ ಖಾನ್ ಸೇನೆಯ ಬಗ್ಗೆ ಅತ್ಯಂತ ಆಕ್ರಮಣಕಾರಿ ನಿಲುವನ್ನು ತೆಗೆದುಕೊಂಡರು. ವಿಶೇಷವಾಗಿ ಜನರಲ್ ಕಮರ್ ಜಾವೇದ್ ಬಾಜ್ವಾ ಅವರನ್ನು ಟಾರ್ಗೆಟ್‌ ಮಾಡಿದ್ರು. ಇದೇ ಕಾರಣಕ್ಕೆ ಇಮ್ರಾನ್‌ ಖಾನ್‌ ಹಾಗೂ ಸೇನೆ ನಡುವಣ ಸ್ನೇಹ ಹಗೆತನವಾಗಿ ಬದಲಾಗಿಬಿಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...