ದುಬೈನಲ್ಲಿ ನಡೆದ ಟಿ20 ವಿಶ್ವಕಪ್ ನ 2 ನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿದ ಆಸ್ಟ್ರೇಲಿಯಾ ಫೈನಲ್ ಗೆ ಲಗ್ಗೆ ಇಟ್ಟಿದೆ. 5 ವಿಕೆಟ್ ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿರುವ ಆಸ್ಟ್ರೇಲಿಯಾ, ನ.14 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡದೊದಿಗೆ ಮುಖಾಮುಖಿಯಾಗಲಿದೆ.
ಗುರುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 176 ರನ್ ಕಲೆ ಹಾಕಿತು. ಬಳಿಕ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲಿ ಮುಗ್ಗರಿಸಿತಾದರೂ ಬಳಿಕ ಮ್ಯಾಥ್ಯೂ ವೇಡ್ ಅವರ ಅದ್ಭುತ ಬ್ಯಾಟಿಂಗ್ ನಿಂದಾಗಿ ಜಯದ ದಡ ತಲುಪಿತು. ಮ್ಯಾಥ್ಯೂ ವೇಡ್ ಕೇವಲ 17 ಎಸೆತಗಳಲ್ಲಿ ಅಜೇಯ 41 ರನ್ಗಳನ್ನು ಸಿಡಿಸುವ ಮೂಲಕ ಆಸ್ಟ್ರೇಲಿಯಾವನ್ನು ಸೋಲಿನ ಸುಳಿಯಿಂದ ಪಾರು ಮಾಡಿದರು.
ಆಸ್ಟ್ರೇಲಿಯಾ ತಂಡ ಈಗ ಮೊದಲ ಬಾರಿ ಫೈನಲ್ ತಲುಪಿರುವ ನ್ಯೂಜಿಲೆಂಡ್ ವಿರುದ್ಧ ನ.14 ರಂದು ಪಂದ್ಯ ಆಡಲಿದೆ. ಈ ಪಂದ್ಯ ಕ್ರಿಕೆಟ್ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದ್ದು, ಗೆಲುವು ಯಾರಿಗೆ ಒಲಿಯಲಿದೆ ಎಂಬುದರ ಕುರಿತು ಭಾರೀ ಮೊತ್ತದ ಬೆಟ್ಟಿಂಗ್ ಕೂಡಾ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.