ಮಲೆನಾಡು, ಕರಾವಳಿ, ಬಯಲು ಸೀಮೆ ಹೀಗೆ ಮೂರು ವಿಧದ ಪ್ರದೇಶಗಳನ್ನೂ ತನ್ನ ಒಡಲಿನಲ್ಲಿಟ್ಟುಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ, ಕಾಳಿ ನದಿಯ ದಡದಲ್ಲಿರುವ ಚಿಕ್ಕ ನಗರ. ತನ್ನ ಪರಿಸರದಿಂದಲೇ ಪ್ರಸಿದ್ದವಾಗಿರುವ ಇಲ್ಲಿ ಕೇವಲ ಕಾಗದದ ಕಾರ್ಖಾನೆ ಮಾತ್ರವಲ್ಲ ಮನದ ನೋವು ಮರೆಸುವ ಪಶ್ಚಿಮ ಘಟ್ಟಗಳ ಸುಂದರ ಹಸಿರಿನ ಸೊಬಗೇ ಅದ್ಭುತ.
ದಟ್ಟ ದಂಡಕಾರಣ್ಯ ಇರುವುದರಿಂದ ದಾಂಡೇಲಿ ಪಟ್ಟಣವೆಂಬ ಹೆಸರು ಪಡೆದ ಈ ಪ್ರಕೃತಿಯ ತಾಣಕ್ಕೆ ದಾಂಡೇಲಪ್ಪ ದೇವಸ್ಥಾನದಿಂದಾಗಿ ದಾಂಡೇಲಿ ಎಂಬ ಹೆಸರು ಬಂತು ಎಂಬ ಮತ್ತೊಂದು ಪ್ರತೀತಿಯೂ ಇದೆ. ಇಷ್ಟು ಮಾತ್ರವಲ್ಲ ದಂಡಕ ನಾಯಕ ಎಂಬ ರಾಜನು ಇಲ್ಲಿರುವ ಪ್ರಕೃತಿ ಸೌಂದರ್ಯವನ್ನು ನೋಡಿ ಈ ಅರಣ್ಯಕ್ಕೆ ತನ್ನದೇ ಹೆಸರು ಇರಲಿ ಎಂದು ಇಟ್ಟನೆಂದು ನಂತರ ಕ್ರಮೇಣ ದಾಂಡೇಲಿ ಎಂದಾಯಿತು ಎಂಬುದಾಗಿ ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಏನಿದರ ವಿಶೇಷತೆ..?
ರಾಜ್ಯದಲ್ಲಿಯೇ ಎರಡನೇ ದೊಡ್ಡ ವನ್ಯಜೀವಿ ಧಾಮವೆಂದು ಕರೆಯಲ್ಪಡುವ ದಾಂಡೇಲಿಗೆ ಪ್ರತಿನಿತ್ಯವೂ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿರುವ ವನ್ಯಜೀವಿ ಧಾಮವು ಹುಲಿ, ಚಿರತೆ, ಕಾಡಾನೆ, ಜಿಂಕೆ, ಕಾಡೆಮ್ಮೆ, ಕರಡಿ, ನರಿ, ತೋಳ, ಲಂಗೂರ ಸೇರಿದಂತೆ ಸುಮಾರು 300 ಕ್ಕೂ ಹೆಚ್ಚು ಪ್ರಾಣಿ, ಪಕ್ಷಿಗಳಿಗೆ ಆಶ್ರಯ ನೀಡಿದ್ದು ಪ್ರವಾಸಿಗರ ಕಣ್ಮನ ತಣಿಸುತ್ತದೆ.
ಅಲ್ಲದೇ ಇಲ್ಲಿನ ಕಾಳಿ ನದಿಯಲ್ಲಿ ಸಾಹಸ ಜಲಕ್ರೀಡೆಗಳಾದ ರ್ಯಾಫ್ಟಿಂಗ್, ಕಾಯಕಿಂಗ್, ಕನೋಯಿಂಗ್ ಸೇರಿದಂತೆ ಹಲವಾರು ಕ್ರೀಡೆಗಳಿಗೆ ಅವಕಾಶವಿದ್ದು, ಕುಟುಂಬ ಸಮೇತ ಆಗಮಿಸಿ ಇದರ ಮಜಾವನ್ನು ಅನುಭವಿಸಬಹುದು. ಜೊತೆಗೆ ಗುಡ್ಡಗಾಡು ಸೈಕಲ್ ಸವಾರಿ, ಚಾರಣ ಹಾಗೂ ಮೊಸಳೆಗಳ ಪಾರ್ಕ್, ಬೋಟಿಂಗ್, ಮೀನುಗಾರಿಕೆ, ಪಕ್ಷಿ ವೀಕ್ಷಣೆಯಿಂದಲೂ ಅಮಿತ ಆನಂದ ಹೊಂದಬಹುದು. ಸುತ್ತ ಹರಡಿರುವ ದಟ್ಟ ಅರಣ್ಯ ಹೊರ ಪ್ರಪಂಚದ ಅರಿವಾಗದಂತೆ ಪ್ರವಾಸಿಗರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ.
ಪ್ರಯಾಣ ಹೇಗೆ…?
ಶಿರಸಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿಗಳಿಂದ ದಾಂಡೇಲಿಗೆ ತೆರಳಲು ಸಾಕಷ್ಟು ಬಸ್ ವ್ಯವಸ್ಥೆಯಿದ್ದು, ಸ್ವಂತ ವಾಹನದಲ್ಲಿಯೂ ನಿರಾತಂಕವಾಗಿ ಪ್ರಯಾಣಿಸಬಹುದಾಗಿದೆ. ಅಲ್ಲದೇ ದಾಂಡೇಲಿ ಸಮೀಪದಲ್ಲಿಯೇ ಉಳವಿ, ಸ್ಪೈಕ್ಸ್ ಪಾಯಿಂಟ್, ಸುಪಾ ಡ್ಯಾಮ್, ಸಿಂಥೇರಿ ರಾಕ್ಸ್, ಕವಲ ಗುಹೆಗಳೂ ಇದ್ದು ಇವೆಲ್ಲವನ್ನೂ ನೋಡಲು ಒಂದೆರಡು ದಿನ ಬಿಡುವು ಮಾಡಿಕೊಂಡು ಹೋಗುವುದು ಸೂಕ್ತ.