ಮಹಿಳೆಯ ಪರ್ಸ್ ಕದಿಯಲು ಸಿಕ್ಕಿ ಹಾಕಿಕೊಂಡಿದ್ದ ಕಳ್ಳ ಪೊಲೀಸರಿಗೆ ಬರೋಬ್ಬರಿ 7.75 ಕೋಟಿ ರೂಪಾಯಿ ಲಂಚ ಕೊಟ್ಟು ಬಂಧನದಿಂದ ಪಾರಾಗಲು ಯತ್ನಿಸಿದ್ದಾನೆ…!
ಯುಎಸ್ ನಲ್ಲಿ ಈ ಘಟನೆ ಮೇ 17 ರಂದು ನಡೆದಿದೆ. ರಿಕಾರ್ಡೋ ಎಸ್ಪಾರ್ಝ ಎಂಬ ಕಳ್ಳ ಮಹಿಳೆಯನ್ನು ಹಿಂಬಾಲಿಸುತ್ತಿದ್ದ. ಇದನ್ನು ಗಮನಿಸಿದ ಮಹಿಳೆ ತಟ್ಟನೆ ಹಿಂದಿರುಗಿ ನೋಡಿದ್ದಾಳೆ. ಆಗ ಆಕೆಯ ಮುಖಕ್ಕೆ ಗುದ್ದಿದ ಕಳ್ಳ, ಆಕೆಯ ಬಳಿ ಇದ್ದ ಪರ್ಸನ್ನು ಕದ್ದಿದ್ದಾನೆ.
ಈ ಬಗ್ಗೆ ಮಹಿಳೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅನತಿ ದೂರದಲ್ಲಿದ್ದ ಕಳ್ಳನನ್ನು ಪತ್ತೆ ಮಾಡಿ ಬಂಧಿಸಿ ಜೀಪಿನಲ್ಲಿ ಕೂರಿಸಿಕೊಂಡು ಪೊಲೀಸ್ ಠಾಣೆಯತ್ತ ಕೊಂಡೊಯ್ಯುತ್ತಿದ್ದರು.
ಈ ವೇಳೆ ಕಳ್ಳ ಎಸ್ಪರ್ಝ, ತನ್ನನ್ನು ಬಿಟ್ಟರೆ 1 ಮಿಲಿಯನ್ ಡಾಲರ್ ಹಣವನ್ನು ನಗದು ರೂಪದಲ್ಲಿ ಅಥವಾ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವುದಾಗಿ ತಿಳಿಸಿದ್ದಾನೆ. ಆಗ ಪೊಲೀಸರು ನಮಗೆ ಲಂಚ ನೀಡಲು ಸಿದ್ಧವಿದ್ದೀಯಾ ಎಂದು ಕೇಳಿದ್ದಕ್ಕೆ ಹೌದು ಎಂದು ಹೇಳಿದ್ದಾನೆ. ಲಂಚದ ಆಮಿಷ ಒಡ್ಡಿದ ಕಳ್ಳನ ಮೇಲೆ ಪೊಲೀಸರು ಮತ್ತೊಂದು ಕೇಸು ದಾಖಲಿಸಿ ಆತನನ್ನು ಸ್ಕಾಟ್ ಕೌಂಟಿ ಜೈಲಿಗೆ ಕಳುಹಿಸಿದ್ದಾರೆ.